ಮಡಿಕೇರಿ: ಐಗೂರು ಮಸೀದಿಯಲ್ಲಿ ಪವಿತ್ರ ಗ್ರಂಥ ಕುರಾನ್ ಸುಟ್ಟು ಹಾಕಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಎಸ್ ಕೆಎಸ್ಎಸ್ಎಫ್ ಸಂಘಟನೆಯ ನೆಲ್ಯಹುದಿಕೇರಿ ಶಾಖೆ ಮುಂದಿನ ಏಳು ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಖೆಯ ಸಂಚಾಲಕ ಪಿ.ಎಂ.ಶುಕೂರ್ ಪ್ರಕರಣ ನಡೆದು ಹಲವು ದಿನಗಳೇ ಕಳೆದಿದ್ದರೂ ಇನ್ನೂ ಕೂಡ ಆರೋಪಿಗಳ ಬಂಧನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್ ಗೆ ಬೆಂಕಿ ಹಚ್ಚುವ ಮೂಲಕ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ. ಆದರೆ ಗ್ರಂಥದ ಪಾವಿತ್ರ್ಯತೆಗೆ ಯಾವುದೇ ರೀತಿಯ ದಕ್ಕೆಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟ ಅವರು ವಿವಿಧ ಸಂಘ ಸಂಸ್ಥೆಗಳು ಹೇಳಿಕೆಗಳನ್ನು ನೀಡುತ್ತಿದ್ದರೂ ಇನ್ನೂ ಕೂಡ ಆರೋಪಿಗಳನ್ನು ಬಂಧಿಸದೆ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ವಕೀಲ ಪದ್ಮನಾಭ ಎಂಬುವವರ ಕಾರಿಗೆ ಬೆಂಕಿ ಹಚ್ಚಿರುವ ಘಟನೆಯೂ ಅತ್ಯಂತ ಖಂಡನೀಯವೆಂದರು. ತಕ್ಷಣ ಪೊಲೀಸರು ನೈಜ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ವ ಧಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಶುಕೂರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಕೆ.ಎಂ.ಮೊಹಿನುದ್ದೀನ್, ಪ್ರಧಾನ ಕಾರ್ಯದರ್ಶಿ ಎನ್.ಎಂ.ಶಂಷುದ್ದೀನ್, ಜಂಟಿ ಕಾರ್ಯದರ್ಶಿ ಸಿ.ಹೆಚ್.ಜಂಶೀರ್, ಕೋಶಾಧಿಕಾರಿ ಪಿ.ಎಂ.ಅಶ್ರಫ್ ಹಾಗೂ ಸದಸ್ಯರಾದ ಸಿ.ಎಲ್.ಶೌಕತ್ ಉಪಸ್ಥಿತರಿದ್ದರು.