ಮಡಿಕೇರಿ: ಮಕ್ಕಳ ಅಪಹರಣದ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೇ ಕೊಡಗಿನಲ್ಲಿ ಈ ಕುರಿತು ಪೊಲೀಸ್ ಇಲಾಖೆ ನಿಗಾ ವಹಿಸಿದೆ.
ಜಿಲ್ಲೆಯ ಗಡಿಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿರುವ ಇಲಾಖೆ ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪೋಷಕರು ಎಚ್ಚರವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಪುಟ್ಟ ಕಂದಮ್ಮಗಳನ್ನು ಅಪಹರಣ ಮಾಡುತ್ತಿದ್ದ ಜಾಲವನ್ನು ಇತ್ತೀಚೆಗೆ ಬಂಧಿಸಿ ತನಿಖೆಗೊಳಪಡಿಸಿದಾಗ ಜಾಲದ ಕಿಂಗ್ ಪಿನ್ ಕೇರಳದವನು ಎಂಬುದು ತಿಳಿದು ಬಂದಿತ್ತು. ಹೀಗಾಗಿ ಕೊಡಗಿಗೂ ಮತ್ತು ಕೇರಳಕ್ಕೂ ಸಂಪರ್ಕ ಜಾಲವಿರುವುದರಿಂದ ಕೊಡಗಿನಿಂದ ಮಕ್ಕಳನ್ನು ಅಪಹರಿಸಿ ಕೇರಳಕ್ಕೆ ಸಾಗಿಸುವುದು ಕಷ್ಟವೇನಲ್ಲ.
ಸಿದ್ದಾಪುರ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಈ ಹಿಂದೆ ಮಕ್ಕಳ ಅಪಹರಣಕ್ಕೆ ವಿಫಲ ಯತ್ನ ನಡೆದಿರುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಭಯವಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ಮಕ್ಕಳು ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿರುವುದರಿಂದ ಪೋಷಕರಲ್ಲಿ ಸಾಮಾನ್ಯವಾಗಿ ಭಯ ಇದ್ದೇ ಇರುತ್ತದೆ. ಆದರೆ ಎಸ್ಪಿ ರಾಜೇಂದ್ರಪ್ರಸಾದ್ ಈ ಬಗ್ಗೆ ಯಾವುದೇ ರೀತಿಯ ಆತಂಕ ಪಡುವಂತಿಲ್ಲ ಪೊಲೀಸ್ ಇಲಾಖೆ ಸಮರ್ಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಜಿಲ್ಲೆಯ 150 ಶಾಲಾ ಮುಖ್ಯೋಪಾ ಧ್ಯಾಯರುಗಳನ್ನು ಕರೆಯಿಸಿ ಸಭೆ ನಡೆಸಿದ್ದು, ಅಪರಿಚಿತರು ಶಾಲೆಗಳಿಗೆ ಬಂದು ಮಕ್ಕಳನ್ನು ಕಳುಹಿಸುವಂತೆ ಕೋರಿದರೆ ಕಳುಹಿಸದಂತೆಯೂ ಮನವಿ ಮಾಡಲಾಗಿದೆ. ಅಲ್ಲದೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುನ್ಸೂಚನೆ ನೀಡಿದ್ದಾರೆ.
ಎಲ್ಲ ಶಾಲೆಗಳಿಗೆ ಸಿಸಿಟಿವಿ ಅಳವಡಿಕೆ, ಭದ್ರತೆಯ ಬಗ್ಗೆ ಭದ್ರತಾ ಸಿಬ್ಬಂದಿ ನೇಮಕ, ಶಾಲಾ ಬಸ್, ಟೆಂಪೊ, ಆಟೋಗಳ ಚಾಲಕರ ಸಂಪೂರ್ಣ ವಿಳಾಸ, ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಶಾಲಾ ಮುಖ್ಯಸ್ಥರು ಶಾಲಾ ವಾಹನಗಳ ಚಾಲಕರಿಗೆ ಮಕ್ಕಳ ಅಪಹರಣ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು, ಶಾಲಾ ವಿದ್ಯಾಥರ್ಿಗಳು ಒಬ್ಬಂಟಿಯಾಗಿ ತಿರುಗಾಡದಂತೆ ತಿಳುವಳಿಕೆ ನೀಡುವುದು, ಶಾಲಾ ವಿದ್ಯಾರ್ಥಿಗಳು ಅಪರಿಚಿತರು ನೀಡುವ ಯಾವುದೇ ಆಮಿಷ, ಸಿಹಿ ತಿಂಡಿ ಹಾಗೂ ಇತರ ವಸ್ತುಗಳನ್ನು ಸ್ವೀಕರಿಸದಂತೆ ಹಾಗೂ ಅಪರಿಚಿತರೊಂದಿಗೆ ಹೋಗದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದು, ಅಪರಿಚಿತ ವ್ಯಕ್ತಿಗಳು ಶಾಲಾ ಆವರಣದಲ್ಲಿ, ನಿರ್ಜನ ಪ್ರದೇಶದಲ್ಲಿ ಕಂಡುಬಂದಲ್ಲಿ ಅವರ ಚಹರೆ, ವಾಹನ ನೋಂದಣಿ ಸಂಖ್ಯೆಯನ್ನು ಗಮನಿಸಿದ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವಾ ನಿಸ್ತಂತು ಘಟಕದ ದೂರವಾಣಿ ಸಂಖ್ಯೆ 082722282330 ಅಥವಾ 100 ಕ್ಕೆ ಕರೆ ಮಾಡಿ ಮಾಹಿತಿ ನೀಡುವುದು, ಶಾಲೆಯಲ್ಲಿ ದಿನಂಪ್ರತಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುವ ವೇಳೆ ಮಾಹಿತಿಯಿಲ್ಲದೇ ಗೈರು ಹಾಜರಾದ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸುವುದು ಹಾಗೂ ಗೈರು ಹಾಜರಾತಿ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ವಿಚಾರಗಳನ್ನು ಪೊಲೀಸರು ಶಿಕ್ಷಕರಿಗೆ ತಿಳಿಸಿದ್ದಾರೆ.
ಒಂದು ವೇಳೆ ಮಕ್ಕಳ ಅಪಹರಣದಂತಹ ಜಾಲ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವುದು ಅರಿವಿಗೆ ಬಂದಲ್ಲಿ ಸಾರ್ವಜನಿಕರು ಕೂಡ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.