ಕೊಡಗು: ಜನರ ನಿದ್ದೆಗೆಡಿಸುತ್ತಿರುವ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯ ಮುಂದಿನ ದಿನಗಳಲ್ಲಿಯೂ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಐದು ಪುಂಡಾನೆಗಳನ್ನು ಸೆರೆಹಿಡಿದಿರುವ ಅರಣ್ಯ ಇಲಾಖೆ ಮತ್ತೆ ಐದು ಪುಂಡಾನೆಗಳನ್ನು ಸೆರೆಹಿಡಿಯುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಜನರ ಮೇಲೆ ದಾಳಿ ಮಾಡುತ್ತಿದ್ದ 5 ಕಾಡಾನೆಗಳನ್ನು ಈಗಾಗಲೇ ಜಿಲ್ಲಾ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಆದರೆ ಆನೆಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಹಿಂಡಿನಲ್ಲಿ ಮತ್ತಷ್ಟು ಕಾಡಾನೆಗಳು ಪುಂಡಾಟ ನಡೆಸುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.
ಕಾಡಾನೆಗಳ ಸೆರೆಗೆ ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಸೆರೆ ಹಿಡಿಯುವ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಜಿಲ್ಲಾ ಅರಣ್ಯ ಇಲಾಖೆ ಬೋಯಿಕೇರಿಯಲ್ಲಿ ಒಟ್ಟು ಐದು ಕಾಡಾನೆಗಳನ್ನು ಸೆರೆ ಹಿಡಿದಿದ್ದು, ಅವುಗಳನ್ನು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ. ಇದೀಗ ಮತ್ತೆ ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಕೋರಿದ್ದು, ಅನುಮತಿ ದೊರೆತ ನಂತರ ಕಾರ್ಯಾಚರಣೆ ನಡೆಸಿ ಅವುಗಳನ್ನು ಸಾಕಾನೆ ಶಿಬಿರದಲ್ಲಿ ಪಳಗಿಸಲು ಚಿಂತನೆ ನಡೆಸಲಾಗಿದೆ.
ಕೊಡಗು ಜಿಲ್ಲೆಯ ಸಿದ್ದಾಪುರ, ಚೆಟ್ಟಳ್ಳಿ, ಪಾಲಿಬೆಟ್ಟ ಮತ್ತಿತರ ಪ್ರದೆೇಶಗಳಲ್ಲಿ ಹಿಂಡು ಹಿಂಡು ಆನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ಇದರಿಂದ ಭಯಗೊಳ್ಳುವ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆ ಹಿಂಡಿನಲ್ಲಿ ಉಪಟಳ ನೀಡುತ್ತಿರುವ ಆನೆಗಳನ್ನು ಗುರುತಿಸಿ ಅಂತಹ ಆನೆಗಳನ್ನು ಸೆರೆ ಹಿಡಿದು ಸಾಕಾನೆ ಶಿಬಿರಗಳಿಗೆ ಕಳುಹಿಸಲು ಅರಣ್ಯ ಇಲಾಖೆ ಸಜ್ಜಾಗಿದೆ.
ದುಬಾರೆ ಆನೆ ಶಿಬಿರದ ಮೇಲೆ ಎಲ್ಲ ರೀತಿಯಿಂದಲೂ ಒತ್ತಡ ಹೆಚ್ಚಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಚಿಕ್ಲಿ ಹೊಳೆ ವ್ಯಾಪ್ತಿಯಲ್ಲಿ ಮತ್ತೊಂದು ಸಾಕಾನೆ ಶಿಬಿರವನ್ನು ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಚಿಕ್ಲಿಹೊಳೆ ಹಿನ್ನೀರು ಮತ್ತು ಅರಣ್ಯ ಪ್ರದೇಶ ಇರುವ ಹಿನ್ನಲೆಯಲ್ಲಿ ಜಾಗ ಮತ್ತು ಶಿಬಿರ ಆರಂಭಿಸಲು ಸಮಸ್ಯೆ ಇಲ್ಲ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾವುತರು ಹಾಗೂ ಕಾವಾಡಿಗಳು ಉಳಿದುಕೊಳ್ಳಲು ವಸತಿ ಗೃಹಗಳ ಅವಶ್ಯಕತೆ ಇದೆ. ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿ ಗೃಹಗಳನ್ನು ಇಲಾಖೆಗೆ ಬಳಕೆಗಾಗಿ ನೀಡುವಂತೆ ಕೋರಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಒಟ್ಟು 12 ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದು, ಅದರಲ್ಲಿ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 5 ಕಾಡಾನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮತ್ತಷ್ಟು ಕಾಡಾನೆಗಳು ದಾಳಿ ಮಾಡುತ್ತಿರುವ ಬಗ್ಗೆ ಸಂಬಂಧಿಸಿದವರು ದೂರು ನೀಡಿದ್ದಾರೆ. ಆದ್ದರಿಂದ ಉಪಟಳ ನೀಡುತ್ತಿರುವ ಆನೆಗಳನ್ನು ಸೆರೆ ಹಿಡಿಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.