ಮಡಿಕೇರಿ: ದಕ್ಷಿಣ ಕೊಡಗಿನ ಕೆಲವೆಡೆ ಹಕ್ಕಿಗಳು ಸಾವನ್ನಪ್ಪುತ್ತಿದ್ದು ಪರಿಣಾಮ ಸಾರ್ವಜನಿಕರಲ್ಲಿ ಹಕ್ಕಿಜ್ವರದ ಆತಂಕ ವ್ಯಕ್ತವಾಗಿದೆ. ವೀರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ರೇಷ್ಮೆಹಡ್ಲು, ತಾರಿಕಟ್ಟೆ ಮೊದಲಾದ ಕಡೆಗಳಲ್ಲಿ ಬಿಳಿ ಮತ್ತು ಕಂದು ಬಣ್ಣದ ಕೊಳದ ಬಕ (ಗದ್ದೆಗುಮ್ಮ) ಪಕ್ಷಿ ಹಾಗೂ ಚೋರೆ ಹಕ್ಕಿಗಳು ಸಾವನ್ನಪ್ಪುತ್ತಿರುವುದು ಅನುಮಾನಗಳನ್ನು ಹುಟ್ಟು ಹಾಕಿವೆ.
ಈ ಹಕ್ಕಿಗಳು ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡು ವಾಸಿಸುತ್ತಿದ್ದು, ಇಲ್ಲಿಯವರೆಗೆ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಹಕ್ಕಿಗಳು ಸಾಯಲು ಕಾರಣವೇನು? ಅವುಗಳಿಗೆ ತಗುಲಿದ ರೋಗವೇನು ಎಂಬವುದು ಜನ ಸಾಮಾನ್ಯರನ್ನು ಕಾಡುತ್ತಿದೆ. ಕೆಲವೊಮ್ಮೆ ವಾತಾವರಣದ ವ್ಯತಿರಿಕ್ತ ಪರಿಣಾಮ ಸಾವಿಗೆ ಕಾರಣವಾಗಿರಬಹುದಾ ಎಂಬುದನ್ನು ನೋಡಿದರೆ ಅದು ಸಾಧ್ಯವಿಲ್ಲ. ಕಾರಣ ಹಲವು ವರ್ಷಗಳಿಂದ ಇಲ್ಲಿಗೆ ಒಗ್ಗಿಕೊಂಡು ವಾಸಿಸುವ ಹಕ್ಕಿಗಳು ಇವುಗಳಾಗಿವೆ. ಹೀಗಿರುವಾಗ ಸಾವಿಗೆ ಕಾರಣಗಳು ಮಾತ್ರ ನಿಗೂಢವಾಗಿದೆ.ಈ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನೀರಿಗೆ ತೊಂದರೆಯಿರುವುದರಿಂದ ಕೊಳಚೆ ನೀರು ಅಥವಾ ಕೃಷಿಗೆ ಬಳಕೆಯಾದ ರಾಸಾಯನಿಕಯುಕ್ತ ನೀರು ಸೇವಿಸಿ ಸಾವನ್ನಪ್ಪಿರಬಹುದು ಎಂಬುದು ಕೆಲವರ ಅನಿಸಿಕೆಯಾಗಿದೆ.
ಇನ್ನು ಮಾವಕಲ್ಲು ಮೀಸಲು ಅರಣ್ಯದ ಅಂಚಿನಲ್ಲಿರುವ ತಾರಿಕಟ್ಟೆಯಲ್ಲಿ ಕೊಳದ ಬಕ ಪಕ್ಷಿಗಳು ಕುಳಿತ ಮರದಿಂದಲೇ ಕೆಳಗೆ ಬಿದ್ದು ಸಾವನ್ನಪ್ಪುತ್ತಿವೆ. ಈ ಪಕ್ಷಿಗಳನ್ನು, ನಾಯಿ ಸೇರಿದಂತೆ ಇತರ ಪ್ರಾಣಿಗಳು ತಿನ್ನುತ್ತಿದ್ದು ಕಾಯಿಲೆಗಳು ಹರಡುವ ಭಯವೂ ಎದುರಾಗಿದೆ. ಪಕ್ಷಿಗಳು ಸಂಪೂರ್ಣ ಅಸ್ವಸ್ಥಗೊಂಡಿದ್ದು, ಹಾರಾಡಲೂ ಸಾಧ್ಯವಾಗದೆ ನೆಲದಲ್ಲಿ ನಡೆಯುತ್ತಾ ಕೊನೆಗೆ ಅಲ್ಲಿಯೇ ಬಿದ್ದು ಸಾವನ್ನಪ್ಪುತ್ತಿರುವುದು ವಿಶೇಷವಾಗಿದೆ.
ಕೊಡಗಿನಲ್ಲಿ ಹಿಂದಿನಿಂದಲೂ ಕಂಡು ಬರುತ್ತಿರುವ ಚೋರೆ ಹಕ್ಕಿ ಕೂಡ ಸಾವನ್ನಪ್ಪುತ್ತಿರುವುದು ಅಚ್ಚರಿ ತಂದಿದೆ. ಕಳೆದ ಎರಡು ವಾರಗಳಿಂದ ಈ ಪಕ್ಷಿಗಳು ಸಾವನ್ನಪ್ಪುತ್ತಿವೆಯಂತೆ. ಈ ವ್ಯಾಪ್ತಿಯಲ್ಲಿ ದುರ್ವಾಸನೆ ಬೀರುತ್ತಿದ್ದು, ಸಾಕಿದ ಕೋಳಿಗಳು ಕೂಡ ಸೊರಗಿ ಸಾಯುತ್ತಿವೆ ಎಂದು ಹೇಳಲಾಗಿದೆ.
ಪಕ್ಷಿಗಳ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳ ಬಳಿಯೂ ಸಮರ್ಪಕ ಉತ್ತರವಿಲ್ಲ. ಅವರು ಕೂಡ ವೈದ್ಯಕೀಯ ಪರೀಕ್ಷೆ ಬಳಿಕ ಸಾವಿಗೆ ಕಾರಣಗಳು ತಿಳಿಯಬೇಕಾಗಿದೆ ಎಂಬುವುದಾಗಿ ಹೇಳುತ್ತಿದ್ದಾರೆ. ಕೆಲವು ಸಮಯಗಳ ಹಿಂದೆ ಹಕ್ಕಿ ಜ್ವರದ ಭಯದ ಹಿನ್ನಲೆಯಲ್ಲಿ ಮೈಸೂರಿನ ಮೃಗಾಲಯ ಮತ್ತು ರಂಗನತಿಟ್ಟು ಹಕ್ಕಿಗಳ ಮಲವನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದೀಗ ಸಾವನ್ನಪ್ಪಿರುವ ಪಕ್ಷಿಗಳ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಸಾವಿಗೆ ಕಾರಣ ತಿಳಿಯಬೇಕಿದೆ. ತಪ್ಪಿದಲ್ಲಿ ಇದರ ಪರಿಣಾಮ ಇತರ ಪಕ್ಷಿಗಳ ಮೇಲೆಯೂ ಬೀಳಬಹುದು. ಗೋಣಿಕೊಪ್ಪಲು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಪಕ್ಷಿ ತಜ್ಞ ಡಿ.ಕೃಷ್ಣಚೈತನ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಿಸಿಲಿನ ತಾಪಕ್ಕೆ ಹಕ್ಕಿಜ್ವರ ಬಂದಿರುವ ಸಾಧ್ಯತೆ ಬಗ್ಗೆ ತಿಳಿಸಿದ್ದಾರೆ. ಪಕ್ಷಿಗಳ ಸಾವಿಗೆ ನೈಜ ಕಾರಣ ತಿಳಿಯುವ ತನಕ ಈ ವ್ಯಾಪ್ತಿಯ ಜನರ ಆತಂಕ ಮಾತ್ರ ದೂರವಾಗುವ ಲಕ್ಷಣಗಳು ಕಾಣುತ್ತಿಲ್ಲ.