ಕುಶಾಲನಗರ: ಕೊಡಗು ಜಿಲ್ಲೆಯಲ್ಲೇ ಪ್ರತಿಷ್ಠೆಯ ದರೋಡೆ ಪ್ರಕರಣವನ್ನು ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಬೇಧಿಸಿರುವುದಾಗಿ ಮತ್ತು ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಹೆಚ್.ಟಿ.ಕೃಷ್ಣ ಅಡಗಿಸಿಟ್ಟಿದ್ದ ನಗದು ಮತ್ತು ಒಡವೆಗಳ ಸಮೇತ ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಜೇಂದ್ರಪ್ರಸಾದ್ ಹೇಳಿದರು.
ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಹೊಸಪಟ್ಟಣ ಪಟೇಲ್ ಹೆಚ್.ಬಿ.ಶಿವಕುಮಾರ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳು ಯಾವ ರೀತಿಯಲ್ಲಿ ದರೋಡೆ ಮಾಡಿದರೆಂಬ ಬಗ್ಗೆ ಈಗಾಗಲೇ ಬಂಧಿಸಿರುವ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ಪಡೆದ ಮಾಹಿತಿಯನುಸರಿಸಿ ಮಡಿಕೇರಿಯ ಆಟೋ ಚಾಲಕ ಮಂಗಳಾದೇವಿ ನಗರದ ನಿವಾಸಿ ಅನೇಕ ಪ್ರಕರಣಗಳಲ್ಲಿ ಸಿಲುಕಿರುವ ಹಾಗೂ ಈ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿರುವ ಕೃಷ್ಣ ದರೋಡೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದು ನಿನ್ನೆ ತಾನು ಬಚ್ಚಿಟ್ಟಿದ್ದ ದರೋಡೆ ಮಾಡಿದ ಹಣ ಮತ್ತು ಒಡವೆಗಳನ್ನು ತೆಗೆದುಕೊಳ್ಳಲು ಬಚ್ಚಿಟ್ಟ ಸ್ಥಳಕ್ಕೆ ಬಂದಾಗ ಮಾರುವೇಶದಲ್ಲಿದ್ದ ನಮ್ಮ ಪೊಲೀಸ್ ಸಿಬ್ಬಂದಿಗಳು ಅವನನ್ನು ಬಂಧಿಸಿ, ಅವನಿಂದ ನಗದು 6,25,930, 12 ಎಳೆಯ ಸಣ್ಣ ಮುತ್ತಿನ ಸರ 1, 1 ಚಿನ್ನದ ನೆಕ್ಲೆಸ್, 2 ಚಿನ್ನದ ಮಾಟಿ, 1 ಚಿನ್ನದ ಪೆಂಡೆಂಟ್, ಕೃತ್ಯವೆಸಗಲು ಬಳಸಿದ್ದ ಗ್ಲೌಸ್, ಪ್ಲಾಸ್ಟಿಕ್ ಟೇಪ್ ಮತ್ತು ಸುತ್ತಲಿ ದಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ದರೋಡೆ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಬೇಧಿಸಿದ ಕುಶಾಲನಗರ ಡಿವೈಎಸ್ಪಿ ಸಂಪತ್ ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಅಪರಾಧ ಪತ್ತೆದಳದ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್, ಪಿಎಸ್ಐಗಳಾದ ಮಹೇಶ್, ಅನೂಪ್ಮಾದಪ್ಪ, ಜಗದೀಶ್, ಪೊಲೀಸ್ ಸಿಬ್ಬಂದಿಗಳಾದ ಜಯಪ್ರಕಾಶ್, ಸುದೀಶ್, ಸಾಜಿ, ಲೋಕೇಶ್, ಮಂಜುನಾಥ್, ಸುರೇಶ್, ನಾಗರಾಜ್, ಮೋಹನ್ ಮುಂತಾದವರನ್ನು ವರಿಷ್ಠಾಧಿಕಾರಿಯವರು ಅಭಿನಂದಿಸಿ, ಇಲಾಖೆಯಿಂದ 20 ಸಾವಿರ ರೂಪಾಯಿಗಳ ಬಹುಮಾನ ಘೋಷಿಸಿದರು.
ಪ್ರಕರಣದ ಹಿನ್ನೆಲೆ: ಈ ದರೋಡೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣ, ಶಿವಕುಮಾರ್ ಅವರ ಮನೆಯ ದರೋಡೆ ಮಾಡಲು ಪ್ರಯತ್ನಿಸಿದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದ ಅಂಶ ಬಾಡಿಗೆ ಆಟೋ ಚಾಲಕನಾಗಿದ್ದ ಕೃಷ್ಣ, ಕಳೆದ ಕೆಲವು ತಿಂಗಳುಗಳಿಂದ ಮಡಿಕೇರಿಯ ಶರೀಫ್ ಎಂಬುವವರ ಬಳಿ ಸುಮಾರು ಒಂದೂವರೆ ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ಹಿಂತಿರುಗಿಸಲು ಒತ್ತಾಯಿಸಿದ ಸಂದರ್ಭದಲ್ಲಿ ಕೃಷ್ಣನ ಪರಿಚಿತ ವ್ಯಕ್ತಿ ಸರ್ವೇ ಇಲಾಖೆಯ ವಿಜಯಕುಮಾರ್ ಎಂಬುವವರು ಹೇಳಿದ್ದ ಶಿವಕುಮಾರ್ ಅವರ ಮನೆಯ ವಾತವರಣ ಹಾಗೂ ಅವರ ಬಳಿ ಇರುವ ಸಾಕಾಷ್ಟು ಸಂಪತ್ತು, ಅವರು ಒಂಟಿಯಾಗಿ ವಾಸಿಸುತ್ತಿರುವ ಬಗ್ಗೆ ಶರೀಫ್ ನೊಂದಿಗೆ ತಿಳಿಸಿದ್ದಾನೆ.
ಶಿವಕುಮಾರ್ ಅವರ ಮನೆಯನ್ನು ತೋರಿಸಲು ಹೇಳಿದ ಕೃಷ್ಣ, ಮೂರು ತಿಂಗಳ ಹಿಂದೆ ವಿಜಯ್ ಕುಮಾರ್ ನೊಂದಿಗೆ ಹೋಗಿ ಮನೆಯನ್ನು ನೋಡಿಕೊಂಡು ಬಂದಿದ್ದ. ನವೆಂಬರ್ 22 ರಂದು ಶಿವಕುಮಾರ್ ಮನೆಯನ್ನು ಶರೀಫ್ ಮತ್ತು ಕೃಷ್ಣ ಮನೆಯ ಸುತ್ತಮುತ್ತಲು ನೋಡಿಕೊಂಡು ಬಂದಿದ್ದರು. ಆ ವಿಚಾರದ ಬಗ್ಗೆ ಇಬ್ಬರೂ ಮಾತನಾಡಿ ಮಂಗಳೂರಿನಲ್ಲಿರುವ ತನ್ನ ಪರಿಚಿತ ನಿಜಾಮ್ ಎಂಬುವವನೊಂದಿಗೆ ಸಂಪರ್ಕಿಸಿ ಅವನು ವಾಹನ ಸಮೇತ 7 ಜನರು ಅಲ್ಲಿಂದ ಮಡಿಕೇರಿಗೆ ಬರುವಂತೆ ಹೇಳಿದ್ದಾನೆ. ಮಡಿಕೇರಿಯಲ್ಲಿ ಎಲ್ಲರೂ ಸೇರಿ ದರೋಡೆಯ ತಂತ್ರಗಳನ್ನು ಸಿದ್ಧಮಾಡಿಕೊಂಡು ದಿನಾಂಕ ನ.23ರಂದು ಕುಶಾಲನಗರದ ಬೈಚನಹಳ್ಳಿಯ ಮಸೀದಿ ಹಿಂಭಾಗದಲ್ಲಿರುವ ಶರೀಫ್ ತಂಗಿಯ ಮನೆಯಲ್ಲಿ ಎಲ್ಲರೂ ಉಳಿದಿದ್ದಾರೆ. ನ.24 ಬೆಳಗ್ಗೆ ಎಲ್ಲರೂ ಸೇರಿ ನಿಜಾಮ್ ತಂದಿದ್ದ ಇನ್ನೋವ ಕಾರಿನ ನಂಬರ್ ಪ್ಲೇಟ್ ಬದಲಿಸಿಕೊಂಡು ಹೊಸಪಟ್ಟಣದ ಕಡೆಗೆ ಹೋಗುತ್ತಾರೆ. ಮೊದಲೇ ಸ್ಕೆಚ್ ಮಾಡಿದಂತೆ ನಿಜಾಮ್ ನಿಗದಿತ ಪ್ರದೇಶದಲ್ಲಿ ವಾಹನದೊಂದಿಗೆ ಇದ್ದು, ಉಳಿದವರನ್ನು ಶಿವಕುಮಾರ್ ಅವರ ಮನೆ ಸುತ್ತ ತೋಟದಲ್ಲಿ ಅಡಗಿಸುತ್ತಾನೆ ಕೃಷ್ಣ. ನಂತರದಲ್ಲಿ ಮನೆಯ ಬಾಗಿಲು ತೆಗೆಯುವುದನ್ನೇ ಹೊಂಚು ಹಾಕಿ ಕಾದು ಮೊದಲು ಶಿವಕುಮಾರ್ ಸೋದರ ಸಂಬಂಧಿ ವಿಶ್ವನಾಥ್, ನಂತರದಲ್ಲಿ ಶಿವಕುಮಾರ್ ಅವರನ್ನು ಕಟ್ಟಿಹಾಕಿ ಬಾಯಿಗೆ ಪ್ಲಾಸ್ಟರ್ ಹಾಕಿ ದರೋಡೆ ನಡೆಸಿದ್ದಾರೆ.
ದರೋಡೆ ಮಾಡಿದ ನಗ ಮತ್ತು ನಗದುಗಳೊಂದಿಗೆ ತೋಟದಲ್ಲಿ ನುಗ್ಗಿ ಬರುತ್ತಿದ್ದ ದರೋಡೆಕೋರರನ್ನು ನೋಡಿ ಹೆಂಗಸೊಬ್ಬಳು ಕಿರುಚಿಕೊಂಡಾಗ ಆ ಸದ್ದು ಕೇಳಿದ ಸಮೀಪದಲ್ಲಿದ್ದ ನಿಜಾಮ್ ವಾಹನದೊಂದಿಗೆ ಪರಾರಿಯಾಗುತ್ತಾನೆ. ಉಳಿದವರು ದಿಕ್ಕು ಕಾಣದೆ ಚಲ್ಲಾಪಿಲ್ಲಿಯಾಗಿ ಕಾಡು-ಮೇಡುಗಳಲ್ಲಿ ನುಗ್ಗಿಹೋಗುತ್ತಾರೆ. ಪೊಲೀಸರ, ಸಾರ್ವಜನಿಕರ ಮತ್ತು ಶ್ವಾನ ಪತ್ತೆದಳದ ಸಹಾಯದಿಂದ ಮೊದಲು 5 ಜನ ಆರೋಪಿಗಳನ್ನು ಹಾಗೂ ಗುರುವಾರ ಮಾಸ್ಟರ್ ಮೈಂಡ್ ಕೃಷ್ಣನನ್ನು ಬಂಧಿಸಲಾಯಿತು. ಅವನಿಂದ ದರೋಡೆ ಮಾಡಲಾದ ಎಲ್ಲಾ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ 3 ಜನ ಆರೋಪಿಗಳಾದ ಮಡಿಕೇರಿಯ ಶರೀಫ್, ದಕ್ಷಿಣ ಕನ್ನಡ ಜಿಲ್ಲೆಯ ಸಲಿಯತ್ ಮತ್ತು ಕಾರು ಚಾಲಕ ನಿಜಾಮ್ ನನ್ನು ಹುಡುಕಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಮನೆಯ ಮಾಹಿತಿ ನೀಡಿದ್ದ ಸರ್ವೇಯರ್ ವಿಜಯ್ ಕುಮಾರ್ ಈಗಾಗಲೇ ಇಲಾಖೆಗೆ ರಜೆ ಸಲ್ಲಿಸಿ, ತಲೆಮರೆಸಿಕೊಂಡಿದ್ದಾರೆ. ಈತ ಈ ಹಿಂದೆ ಕುಶಾಲನಗರದಲ್ಲಿರುವ ಶಿವಕುಮಾರ್ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಶಿವಕುಮಾರ್ ಅವರ ಎಲ್ಲಾ ವಿವರಗಳನ್ನು ತಿಳಿದವರಾಗಿದ್ದನು.