ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಆರಂಭವಾಗಿರುವುದರಿಂದ ಕಾಡುಪ್ರಾಣಿಗಳು ನೀರು ಹುಡುಕಿಕೊಂಡು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿರುವ ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಮುಖವಾಗಿ ಬತ್ತುತ್ತಿವೆ. ಇದನ್ನು ತಡೆಯುವ ಸಲುವಾಗಿ ಕೊಳವೆ ಬಾವಿ ಕೊರೆದು ನೀರಿನ್ನು ಕೆರೆಗೆ ತುಂಬಿಸುವ ಕಾರ್ಯ ನಡೆಯುತ್ತಿದೆ.
ಬೇಸಿಗೆಯ ದಿನಗಳು ಹತ್ತಿರವಾಗುತ್ತಿರುವುದರಿಂದ ಕಾಡಿನಲ್ಲಿ ಮೇವಿಗೂ ಕೊರತೆ ಕಾಣಿಸುತ್ತದೆಯಲ್ಲದೆ, ಕಾಳ್ಗಿಚ್ಚಿನಿಂದ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಅರಣ್ಯದಲ್ಲಿ ಕುಡಿಯುವ ನೀರು ಸಿಗದಿದ್ದರೆ ಪ್ರಾಣಿಗಳು ನೀರು ಮೇವು ಹುಡುಕಿಕೊಂಡು ನಾಡಿನತ್ತ ಬರುವುದು ಖಚಿತವಾಗುತ್ತಿದೆ. ಈಗಾಗಲೇ ಮೇವು ಅರಸಿ ಕಾಡಾನೆ ಮಾತ್ರವಲ್ಲದೆ ಕಾಡು ಹಂದಿಗಳು ಕೂಡ ಬರುತ್ತಿದ್ದು, ರೈತರು ಬರದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆಯನ್ನು ತಿಂದು ನಾಶ ಮಾಡುತ್ತಿವೆ. ಹೀಗಿರುವಾಗ ಬೇಸಿಗೆಯಲ್ಲಿ ಕಾಡಾನೆಗಳು ನೀರಿಗಾಗಿ ನಾಡಿಗೆ ಬಂದರೆ ಸಣ್ಣಪುಟ್ಟ ಪ್ರಾಣಿಗಳು ನೀರಿಲ್ಲದೆ ಸಾಯುವ ಸಾಧ್ಯತೆ ಹೆಚ್ಚಾಗಿದೆ. ಇದೆಲ್ಲವನ್ನು ಮನಗಂಡ ಅರಣ್ಯ ಇಲಾಖೆ ನೀರಿನ ಕೊರತೆ ನೀಗಿಸುವ ಸಲುವಾಗಿ ಕೊಳವೆ ಬಾವಿಗಳನ್ನು ಕೊರೆಸಿ ಸೌರ ಶಕ್ತಿ ಚಾಲಿತ ಮೋಟಾರ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.
ಕಳೆದ ವರ್ಷ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಅಂತರಸಂತೆ ವಲಯ ಹುಲಿಕೆರೆಯಲ್ಲಿ ಕೊಳವೆ ಬಾವಿ ಕೊರೆದು ಸೌರಶಕ್ತಿ ಮೋಟಾರ್ ಮೂಲಕ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗಿತ್ತು. ಮಾದರಿಯನ್ನು ಅಳವಡಿಸಿ ಬಂಡೀಪುರದ ಓಂಕಾರ್ ವಲಯದ ಸೌತ್ ಕೆರೆಯಲ್ಲಿ ಕೊಳವೆ ಬಾವಿಯನ್ನು ಕೊರೆಯಲಾಗಿದ್ದು, ಇಲ್ಲಿಂದ ಸೌರಶಕ್ತಿ ಮೋಟಾರು ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸುಮಾರು 800 ಅಡಿಯಷ್ಟು ಆಳಕ್ಕೆ ಬಾವಿಯನ್ನು ಕೊರೆಸಲಾಗಿದ್ದು, ಸುಮಾರು 300 ಅಡಿಯಷ್ಟು ಆಳದವರೆಗೆ ಪೈಪ್ ಅಳವಡಿಸಲಾಗಿದೆ. 18 ಸೌರ ಫಲಕಗಳ ಸಹಾಯದಿಂದ ವಿದ್ಯುತ್ ಒದಗಿಸಲಾಗಿದ್ದು ಐದು ಅಶ್ವಶಕ್ತಿಯ ಮೋಟಾರ್ ಕಾರ್ಯನಿರ್ವಹಿಸುತ್ತಿದೆ. ಬೆಳಗ್ಗೆ 8ಗಂಟೆಯಿಂದ ಸಂಜೆ 5ಗಂಟೆವರೆಗೂ ಸ್ವಂಕಾರ್ಯನಿರ್ವಹಿಸಲಿದೆ.
ಅರಣ್ಯ ಇಲಾಖೆ ಕೊಳವೆಬಾವಿ ಕೊರೆಸಿದ್ದರೆ, ವರ್ಲ್ಡ್ ವೈಲ್ಡ್ ಲೈಫ್ ಫೌಂಡೇಶನ್ ಸೌರಶಕ್ತಿ ಹಾಗೂ ಮೋಟಾರ್ ಒದಗಿಸಿದೆ. ಇದಕ್ಕೆ ಸುಮಾರು 10ಲಕ್ಷ ರೂ.ವೆಚ್ಚ ತಗುಲಿದೆ ಎನ್ನಲಾಗಿದೆ. ಟಾರ್ಪಲಿನ್ ಅಳವಡಿಸಿದ ಹೊಂಡಕ್ಕೆ ನೀರನ್ನು ತುಂಬಿಸಿ ಶೇಖರಿಸಿಡುವ ಪ್ರಯತ್ನ ಮಾಡಲಾಗುತ್ತಿದೆ. ಸೌರಫಲಕಕ್ಕೆ ಕಾಡುಪ್ರಾಣಿ ಅಥವಾ ಕಾಳ್ಗಿಚ್ಚಿನಿಂದ ಹಾನಿಯಾಗದಂತೆ ಫಲಕ ಇಟ್ಟಿರುವ ಪ್ರದೇಶದ ಸುತ್ತಲೂ ಆಳವಾದ ಕಂದಕ ನಿರ್ಮಾಣ ಮಾಡಲಾಗಿದ್ದು, ಮೋಟಾರಿಗೆ ಕಬ್ಬಿಣದ ಪಟ್ಟಿಗಳಿಂದ ಮುಚ್ಚಲಾಗಿದೆ.
ಅರಣ್ಯವ್ಯಾಪ್ತಿಯಲ್ಲಿ ಈ ರೀತಿಯಾಗಿ ನೀರಿನ ವ್ಯವಸ್ಥೆ ಮಾಡಿದರೆ ಬೇಸಿಗೆಯಲ್ಲಿ ಆಗಬಹುದಾದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.