ಮಡಿಕೇರಿ: ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ನಿರತರಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 35 ಲಕ್ಷದ 46 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿರುವ ಸುಂಟಿಕೊಪ್ಪ ಠಾಣೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಆದಾಯ ಇಲಾಖೆಗೆ ಪ್ರಕರಣವನ್ನು ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರಸಂತೆ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ಅನಂತ್ಕುಮಾರ್, ಕುಶಾಲನಗರದ ಹ್ಯಾಮರ್ಸನ್ ಅಂತೋಣಿ, ಜಮೀಲ್ ಅಹಮ್ಮದ್, ಕೊಪ್ಪದ ಶ್ರೀಧರ್ ಬಂಧಿಸಲಾಗಿದೆ
ಇವರು ಸಮೀಪದ ಕೂರ್ಗ್ ಕೌಂಟಿ ರೆಸಾರ್ಟ್ ನಲ್ಲಿ ಶುಕ್ರವಾರ ವಾಸ್ತವ್ಯ ಹೂಡಿ ಕಪ್ಪು ಹಣವನ್ನು ಬಿಳಿ ಮಾಡುವ ಸಲುವಾಗಿ ಗಿರಾಕಿಗಳಿಗಾಗಿ ರೂ.2,000 ಮುಖಬೆಲೆಯ ರೂ.34 ಲಕ್ಷ 40 ಸಾವಿರ, ರೂ.100 ಮುಖಬೆಲೆಯ ರೂ.96,000, ರೂ.50 ಮುಖಬೆಲೆಯ ರೂ.10 ಸಾವಿರ ರೂ.ಗಳನ್ನಿಟ್ಟುಕೊಂಡು ಕಾಯುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಬಂದ ಹಿನ್ನಲೆಯಲ್ಲಿ ಡಿವೈಎಸ್ಪಿ ಸಂಪತ್ ಕುಮಾರ್, ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪ ಅರಕ್ಷಕ ಠಾಣಾಧಿಕಾರಿ ಅನೂಪ್ ಮಾದಪ್ಪ, ಸಿಬ್ಬಂದಿ ದಯಾನಂದ, ಪುಂಡರಿಕಾಕ್ಷ, ಮುಸ್ತಾಫ ಅವರನ್ನೊಳಗೊಂಡ ತಂಡಕ್ಕೆ ಕೂರ್ಗ್ ಕೌಂಟಿ ರೆಸಾರ್ಟ್ ಮೇಲೆ ದಾಳಿ ನಡೆಸಲು ಆದೇಶ ನೀಡಿದ್ದಾರೆ.
ದಾಳಿ ಸಂದರ್ಭ ಯಾವುದೇ ದಾಖಲೆಗಳಿಲ್ಲದ ಕಪ್ಪು ಹಣವನ್ನಿಟ್ಟುಕೊಂಡು ಬಿಳಿ ಮಾಡಲು ಯತ್ನಿಸುತ್ತಿದ್ದ ಬಿ.ಎಸ್.ಅನಂತ್ ಕುಮಾರ್, ಹ್ಯಾಮರ್ಸನ್ ಅಂತೋಣಿ, ಜಮೀಲ್ ಅಹಮ್ಮದ್, ಶ್ರೀಧರ್ ಎಂಬುವರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.