ಹಾಸನ: ಹಾಸನದ ಯುವತಿಯೊಬ್ಬಳು ಮನೆಯವರ ಸಮ್ಮತಿ ಮೇರೆಗೆ ರಷ್ಯಾದ ಯುವಕನೊಂದಿಗೆ ಹಿಂದೂ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಐರ್ಲೆಂಡಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಗೀವಾಳು ಗ್ರಾಮದ ಪುನೀತಾ ಮತ್ತು ಸಂಗೀತಗಾರ ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನ ಡೆನ್ನಿಸ್ ಕುಚೆರೋವ್ ಸತಿಪತಿಗಳಾದವರು.
ವಿವಾಹಕ್ಕೆ ಎರಡೂ ಕಡೆಯುವರು ಸಮ್ಮತಿಸಿ ಭಾಗವಹಿಸುವುದರೊಂದಿಗೆ ನವಜೋಡಿಗೆ ಶುಭಹಾರೈಸಿದ್ದಾರೆ. ರಷ್ಯಾದ ಯುವಕ ಡೆನ್ನಿಸ್ ತನ್ನ 17 ನೇ ವಯಸ್ಸಿನಿಂದಲೂ ಭಾರತಕ್ಕೆ ಬರುತ್ತಿದ್ದು, ಅನೇಕ ಕಡೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ಇಬ್ಬರೂ ಒಮ್ಮೆ ಆಕಸ್ಮಿಕವಾಗಿ ಭೇಟಿಯಾದ ಸಂದರ್ಭ ಪರಿಚಯವಾಗಿ ಪ್ರೇಮಿಗಳಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.