ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಕೊಡಗಿನಲ್ಲಿ ಶಾಂತಿಯುತವಾಗಿ ಕಳೆದಿದ್ದರೂ ಆ ಬಳಿಕ ಸೋಮವಾರಪೇಟೆ ತಾಲೂಕಿನ ಐಗೂರಲ್ಲಿ ಕುರಾನ್ ಸುಟ್ಟ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗುತ್ತಿದ್ದು, ಐಗೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಈಗಾಗಲೇ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾರೋ ಕಿಡಿಗೇಡಿಗಳು ಮಾಡಿದ ದೃಷ್ಕೃತ್ಯ ಸಮುದಾಯಗಳ ನಡುವೆ ಬಿರುಕು ಸೃಷ್ಟಿಸುತ್ತಿದೆ. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರೋ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕಾಗಿದೆ. ಆದರೆ ಕೆಲವರು ಇದನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದರಿಂದ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದ್ದು ಪರಿಣಾಮ ಅಮಾಯಕರು ತೊಂದರೆಗೀಡಾಗುತ್ತಿದ್ದಾರೆ.
ಐಗೂರಿನಲ್ಲಿರುವ ಮಸೀದಿಯ ಹೆಂಚು ತೆಗೆದು ಒಳನುಗ್ಗಿದ ಕಿಡಿಗೇಡಿಗಳು ಪವಿತ್ರ ಗ್ರಂಥ ಕುರಾನ್ ಬೆಂಕಿ ಹಚ್ಚಿದ್ದರು. ಪ್ರಕರಣ ನವೆಂಬರ್ 13ರಂದು ಬಯಲಾಗಿತ್ತಲ್ಲದೆ, ಬಿಗುವಿನ ವಾತಾವರಣ ಸೃಷ್ಠಿಗೆ ಕಾರಣವಾಗಿತ್ತು. ಇದಾದ ಬಳಿಕ ಅದೇ ಊರಿನ ಆರ್ಎಸ್ಎಸ್ ಮುಖಂಡ, ವಕೀಲ ಕೆ.ಎಸ್. ಪದ್ಮನಾಭ್ ಅವರ ಕಾರಿನ ಗಾಜು ಒಡೆದು ಬೆಂಕಿಯನ್ನು ಕಿಡಿಗೇಡಿಗಳು ಹಚ್ಚಿದ್ದರು.
ಇದೆರಡು ಪ್ರಕರಣಗಳು ನಡೆದು ಒಂದಷ್ಟು ತಣ್ಣಗಾಗಿತ್ತಾದರೂ ಇತ್ತೀಚೆಗೆ ಮತ್ಯಾರೋ ಕಿಡಿಗೇಡಿಗಳು ಟೈಲರ್ ಅಂಗಡಿಯಲ್ಲಿ ಪ್ರಚೋದನೆ ನೀಡುವ ಕರಪತ್ರಗಳನ್ನು ಅಂಟಿಸಲಾಗಿತ್ತು. ಇದು ಗಲಾಟೆಗೆ ಕಾರಣವಾಗಿ ಎರಡು ಕಡೆಯಿಂದ ದೂರು ನೀಡಲಾಗಿತ್ತು. ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದರೂ ಕೆಲವು ಮುಖಂಡರ ಹೇಳಿಕೆಗಳು ಪ್ರಚೋದನೆ ನೀಡುತ್ತಿವೆ. ಇನ್ನಾದರೂ ಕಿಡಿಗೇಡಿಗಳನ್ನು ಬಂಧಿಸಿ ಪ್ರಕರಣಕ್ಕೆ ತೆರೆ ಎಳೆಯ ಬೇಕಿದೆ. ಅಷ್ಟೇ ಅಲ್ಲದೆ ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ನಾಯಕರು ಮಾಡುವುದನ್ನು ಬಿಟ್ಟು ಶಾಂತಿಯಿಂದ ಬಾಳುವುದಕ್ಕೆ ಅವಕಾಶ ಮಾಡಿಕೊಡಬೇಕಿದೆ.