ಕೆ.ಆರ್.ನಗರ: ಎದೆನೋವು ಕಾಣಿಸಿಕೊಂಡು ಚಿಕಿತ್ಸೆಗೆ ದಾಖಲಾಗಿದ್ದ ಯೋಧನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಂಜುನಾಥ್ ಎಂಬುವರ ಪುತ್ರ ಪ್ರತೀಪ (28) ಮೃತಪಟ್ಟ ದುರ್ದೈವಿ ಈತ ಸೇನೆಯಲ್ಲಿ ಕಳೆದ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದನು. ಕೆಲವು ಸಮಯಗಳಿಂದ ಜಮ್ಮುಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದನು.
ಈ ನಡುವೆ ಪ್ರತೀಪನಿಗೆ ವಿವಾಹ ಗೊತ್ತುಮಾಡಲಾಗಿದ್ದು ಅದರಂತೆ ರಜೆಯಲ್ಲಿ ಊರಿಗೆ ಆಗಮಿಸಿದ್ದನು. ಕಳೆದ ಇಪ್ಪತ್ತು ದಿನಗಳ ಹಿಂದೆ ಬಂದಿದ್ದ ಈತನಿಗೆ ವಿವಾಹ ನಿಶ್ಚಯವೂ ಆಗಿತ್ತು. ಆದರೆ ಆರೋಗ್ಯವಾಗಿಯೇ ಇದ್ದ ಈತನಿಗೆ ಮಂಗಳವಾರ ತೀವ್ರ ಎದೆ ನೋವು ಕಾಣಿಸಿಕೊಂಡಿತು ಎನ್ನಲಾಗಿದೆ.
ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.
ಮೃತನ ಅಂತ್ಯಕ್ರಿಯೆ ಸ್ವ-ಗ್ರಾಮ ಕನುಗನಹಳ್ಳಿಯಲ್ಲಿ ನೆರವೇರಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.