ಮಂಡ್ಯ: ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯಕ್ನ ಖಾಸಗಿ ವಾಹನದ ಚಾಲಕ ಕೆ.ಸಿ. ರಮೇಶ್ ಆತ್ಮಹತ್ಯೆ ಬಳಿಕ ಆತ ಬರೆದಿಟ್ಟ ಡೆತ್ನೋಟ್ ಹಲವರ ಕೊರಳಿಗೆ ಉರುಳಾಗುವ ಸಾಧ್ಯತೆ ಹೆಚ್ಚಾಗಿದೆ.
ಈತನ ಸಾವಿನ ನಂತರ ನಡೆಯುತ್ತಿರುವ ಬೆಳವಣಿಗೆಗಳು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲದೆ ದೊಡ್ಡವರ ಅಕ್ರಮ ಬಯಲಾಗುತ್ತಾ ಹೋಗುತ್ತಿದೆ. ಸದ್ಯ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೊಲೀಸರು ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯಕ್ ಹಾಗೂ ಮತ್ತೊಬ್ಬ ಕಾರು ಚಾಲಕ ಮಹಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿ ಗ್ರಾಮದ ನಿವಾಸಿ ಕಾರು ಚಾಲಕ ಕೆ.ಸಿ. ರಮೇಶ್ (30) ಮಂಗಳವಾರ ರಾತ್ರಿ ಮದ್ದೂರು ಪಟ್ಟಣದ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ 11 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯಕ್ನ ಅಕ್ರಮಗಳ ಬಗ್ಗೆ ಬಹಳಷ್ಟು ಮಾಹಿತಿಯಿರುವುದು ಬಹಿರಂಗವಾಗಿದೆ. ರಮೇಶ್ ಸಾಯುವ ಮುನ್ನ ಬರೆದಿಟ್ಟಿದ್ದ ಎನ್ನಲಾದ ಡೆತ್ನೋಟ್ ಬಗ್ಗೆ ಎಲ್ಲರಿಗೂ ಕುತೂಹಲವಿದ್ದು ಅದರಲ್ಲಿ ಏನಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಭೀಮಾನಾಯಕ್ ಬೆಳಗಾವಿಯಲ್ಲಿನ ಸದಾಶಿವನಗರದಲ್ಲಿ ಬಂಗಲೆ ಖರೀದಿ, ಹೊಸಪೇಟೆಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಮಾಡಿ ಖರೀದಿಸಿರುವ 20 ಗುಂಟೆ ಖಾಲಿ ನಿವೇಶನ, ಹಗರಿಬೊಮ್ಮನಹಳ್ಳಿ ತಾ. ಹೊಲ್ಲಬಾಪುರದಲ್ಲಿ ಖರೀದಿಸಿರುವ 30 ಎಕರೆ ಹೊಲ, ಮರಿಯಮ್ಮನಹಳ್ಳಿಯಲ್ಲಿ ಸಹೋದರರ ಹೆಸರಿನಲ್ಲಿ 10 ಎಕರೆ ಆಸ್ತಿ, ಅಟ್ಟೂರು ಯಲಹಂಕದಲ್ಲಿ ಸ್ವಂತ ಮನೆ ಪಕ್ಕದಲ್ಲಿ ಅವರ ಪತ್ನಿಯ ಸಹೋದರಿಯರ 2 ನಿವೇಶನಗಳ ಖರೀದಿ, ತಮ್ಮ ಕೃಷ್ಣಾನಾಯಕ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ತೆರೆದು ಕೋಟ್ಯಾಂತರ ರೂ. ಅವ್ಯವಹಾರ. ಆತನ ಹೆಸರಿನಲ್ಲಿ 2 ದುಬಾರಿ ಕಾರು ಖರೀದಿ, ಮತ್ತೊಬ್ಬ ಸಹೋದರ ಅರ್ಜುನ್ ಹೆಸರಿನಲ್ಲಿ ತವೇರಾ ಕಾರು ಖರೀದಿ, ತಮ್ಮ ಮೇಲಿದ್ದ ತನಿಖೆಗಳನ್ನು ಮುಚ್ಚಿಹಾಕಲು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜು ಅವರಿಗೆ 25 ಲಕ್ಷ ರೂ. ಲಂಚ. ಕೃಷ್ಣಯ್ಯಚೆಟ್ಟಿ ಅಂಡ್ ಸನ್ಸ್ನಲ್ಲಿ 1 ಕೋಟಿಗೂ ಅಧಿಕ ವ್ಯವಹಾರ ನಡೆಸಿದ್ದಾರೆ. ಅದರಲ್ಲಿ 50 ಲಕ್ಷ ರೂ. ವಜ್ರದ ಉಂಗುರ ಖರೀದಿ. ಲಕ್ಷಾಂತರ ರೂ. ಬಟ್ಟೆ ಖರೀದಿ, ಕರ್ನಾಟಕ ಸವಿತಾ ಸಮಾಜದ ಆಡಳಿತಾಧಿಕಾರಿಯಾಗಿ, ಚುನಾವಣಾಧಿಕಾರಿಯಾಗಿದ್ದ ವೇಳೆ ಲೆಕ್ಕಾಧಿಕಾರಿ ಪದ್ಮಿನಿ ಜೊತೆ ಸೇರಿ 25 ಲಕ್ಷಕ್ಕೂ ಹೆಚ್ಚು ಹಣ ಗುಳುಂ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಹಾಗೂ ವಸಂತನಗರದ ದತ್ತಗುರುಮಠಕ್ಕೆ 5 ಲಕ್ಷ ಸಾಮಗ್ರಿ ನೀಡಿದ್ದಾರೆ ಎಂಬುದರ ಬಗ್ಗೆಯೂ ಬರೆದಿದ್ದಾನೆ.
ಇನ್ನೊಂದು ಮಹತ್ತರವಾದ ವಿಚಾರವನ್ನು ಬಿಚ್ಚಿಟ್ಟಿರುವ ಆತ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಪಾರಿಜಾತ ಗೆಸ್ಟ್ ಹೌಸ್ ನಲ್ಲಿ ಕೊಟ್ರೂಸನಾಯಕ ಅವರೊಂದಿಗೆ ಭೇಟಿ ಮಾಡಿ 2018ರಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಮಾತುಕತೆ ನಡೆಸಿ 25 ಕೋಟಿ ರೂ. ಕೊಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಜನಾರ್ಧನರೆಡ್ಡಿ ಅವರ ಮಗಳ ಮದುವೆಗೆ 25 ಕೋಟಿ ರೂ. ವೈಟ್ ಮನಿ ಮಾಡಿಕೊಟ್ಟಿರುವುದಾಗಿಯೂ ತಿಳಿಸಿದ್ದಾನೆ. ವುಡ್ಲ್ಯಾಂಡ್ ಹೋಟೆಲ್ ನಲ್ಲಿರುವ ಶ್ರೀರಾಮುಲು ಅವರ ಕೊಠಡಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಭೀಮಾನಾಯಕ್ ಅವರ ಬಳಿ ಇದ್ದ 500 ಹಾಗೂ 1 ಸಾವಿರ ರೂ. ನೋಟುಗಳ ಸುಮಾರು 100 ಕೋಟಿ ಹಣವನ್ನು ಶೇ. 20ರಂತೆ ಕಮೀಷನ್ ಪಡೆದು ಬದಲಾಯಿಸಿರುವ ಬಗ್ಗೆ ಸ್ಪೋಟಕ ಮಾಹಿತಿಯನ್ನು ನಮೂದಿಸಿದ್ದಾನೆ. ಇದೆಲ್ಲ ನನಗೆ ತಿಳಿದ ಕಾರಣ ಜೀವಬೆದರಿಕೆ ಹಾಕಿ ರೌಡಿಗಳನ್ನು ಕರೆಯಿಸಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂಬ ಬಗ್ಗೆಯೂ ಅದರಲ್ಲಿ ತಿಳಿಸಿದ್ದಾನೆ.