ಹಾಸನ: ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬರು ಮಗುವನ್ನು ಅಪಹರಿಸಿದ ಪ್ರಕರಣ ಇತ್ತೀಚೆಗೆ ನಡೆದಿದ್ದು, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಹಾಗೂ ನಿರ್ಲಕ್ಷ್ಯತೆ ತೋರಿದ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಯವಸೇನೆ ನೇತೃತ್ವದಲ್ಲಿ ಮಗುವಿನ ಪೋಷಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂಬಂಧ ಮಾತನಾಡಿದ ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ಹಾಡಹಗಲೇ ಮಗುವಿನ ಅಪಹರಣ ನಡೆದಿದ್ದು, ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ತೋರಿಸುವ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಕೂಡಲೇ ಅವರನ್ನು ಅಮಾನತು ಮಾಡಬೇಕು, ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರಗಳು ಅಸ್ಪಷ್ಟವಾಗಿದ್ದು ಕಳಪೆ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯತನದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಪದೇ ಪದೇ ಇಂತಹ ಪ್ರಕಣಗಳು ನಡೆಯುತ್ತಿರುವುದು ಖಂಡನೀಯ. ಆಸ್ಪತ್ರೆಯಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದ್ದು ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮಕ್ಕಳ ಮತ್ತು ಮಾನವ ಸಾಗಣೆ ಜಾಲ ಹಾಸನಕ್ಕೂ ವಿಸ್ತರಿಸುವ ಸಂಶಯ ವ್ಯಕ್ತವಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೇ ಅನುಮಾನ ಪಡುವಂತಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮಗುವನ್ನು ಪತ್ತೆಮಾಡಿಕೊಡಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆ ರಾಯ, ಕಾರ್ಯಾಧ್ಯಕ್ಷ ಹೆತ್ತೂರು ನಾಗರಾಜ್, ಮಗುವಿನ ತಂದೆ ನಾಗರಾಜ್, ಪ್ರಕಾಶ್, ಇತರರು ಪಾಲ್ಗೊಂಡಿದ್ದರು.
ಏನಿದು ಘಟನೆ :
ಸಕಲೇಶಪುರ ತಾಲೂಕು ಕುಶಾಲನಗರದ ನಿವಾಸಿ ಮಾದೇವಿ ಅವರು, ಡಿ. 4ರಂದು ಹೆರಿಗೆಗಾಗಿ ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಆದರೆ ಡಿ. 5ರಂದು ಹಾಡುಹಗಲೇ ನರ್ಸ್ ವೇಷ ಧರಿಸಿ ಬಂದ ಮಹಿಳೆಯೊಬ್ಬರು ರಕ್ತಪರೀಕ್ಷೆ ನೆಪದಲ್ಲಿ ಮಗುವನ್ನು ಕರೆದೊಯ್ದವಳು ಮರಳಿ ಬಾರದೆ ಅಪಹರಿಸಿದ್ದಾಳೆ ಎನ್ನಲಾಗಿದೆ.