ಮಡಿಕೇರಿ: ಚೆನ್ನಯ್ಯನಕೋಟೆ ಗ್ರಾಮ ಪಂಚಾಯ್ತಿಯ ದಿಡ್ಡಳ್ಳಿ-ತಟ್ಟಳ್ಳಿಯ ಆದಿವಾಸಿಗಳ ಗುಡಿಸಲನ್ನು ತೆರವುಗೊಳಿಸಿರುವ ಕ್ರಮವನ್ನು ಸಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ಆದಿವಾಸಿ ಮಹಾಸಭಾ ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ ಪಕ್ಷದ ಪ್ರಮುಖ ಕೆ.ವಿ. ಸುನಿಲ್, ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿದರು. ದಿಡ್ಡಲ್ಳಿ ತಟ್ಟಳ್ಳಿ ಆದಿವಾಸಿಗಳ ಗುಡಿಸಲುಗಳನ್ನು ತೆರವುಗೊಳಿಸುವ ಮೂಲಕ ಅಮಾನವೀಯವಾಗಿ ನಡೆದುಕೊಂಡ ಅರಣ್ಯ ಇಲಾಖೆ ವಿರುದ್ಧ ರಾಷ್ಟ್ರಪತಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಕೊಡಗಿನ ಮೂಲ ನಿವಾಸಿಗಳಾಗಿರುವ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯಿಂದ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದರು ಜಿಲ್ಲಾಡಳಿತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಗಮನಿಸಿದರೆ, ಇವರುಗಳಿಗೆ ದುರ್ಬಲರ ಬಗ್ಗೆ ಇರುವ ಕಾಳಜಿಯನ್ನು ತೋರ್ಪಡಿಸುತ್ತದೆಯೆಂದು ಟೀಕಿಸಿದರು.
ಡಿಜಿಟಲ್ ಇಂಡಿಯಾ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ರಾಜಕಾರಣಿಗಳು ಹಾಡಿಯ ಜನರ ಸಂಕಷ್ಟಗಳನ್ನು ಅರಿತುಕೊಂಡಾಗ ಈ ದೇಶದ ಸ್ಥಿತಿಗತಿ ಅರ್ಥವಾಗುತ್ತದೆ. ರಾಜಕಾರಣ ಮತ್ತು ಅಧಿಕಾರವನ್ನು ವ್ಯಾಪಾರೀಕರಣ ಮಾಡಿಕೊಂಡಿರುವ ರಾಜಕಾರಣಿಗಳು ಆದಿವಾಸಿಗಳನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಕೆ.ವಿ. ಸುನಿಲ್ ಆರೋಪಿಸಿದರು.
ದಲಿತರು ಹಾಗೂ ದುರ್ಬಲ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಆತ್ಮಸ್ಥೈರ್ಯವನ್ನು ತುಂಬಬೇಕೇ ಹೊರತು ದೌರ್ಜನ್ಯ ನಡೆಸಬಾರದು. ಜಿಲ್ಲೆ ಕಾಡಾನೆಗಳ ಸಮಸ್ಯೆಯಿಂದ ತತ್ತರಿಸಿ ಹೋಗಿದ್ದರು ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಕಾಡಿನ ಮಕ್ಕಳಾಗಿರುವ ಗಿರಿಜನರ ಬಗ್ಗೆ ಮಾತ್ರ ದೌರ್ಜನ್ಯ ನಡೆಸುತ್ತಿದೆಯೆಂದು ಆರೋಪಿಸಿದರು.
ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದ ಅರಣ್ಯ ಇಲಾಖೆ ಮತ್ತು ಅವರಿಗೆ ರಕ್ಷಣೆ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸುನಿಲ್ ಒತ್ತಾಯಿಸಿದರು. ಎಸ್ಸಿ-ಎಸ್ಟಿ ಸೆಲ್ ಗಳಿಗು ದಿಡ್ಡಳ್ಳಿ ದೌರ್ಜನ್ಯದ ಕುರಿತು ದೂರು ನೀಡಲಾಗುವುದೆಂದು ತಿಳಿಸಿದರು. ಆದಿವಾಸಿ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ್ ಮಾಯಮುಡಿ ಮಾತನಾಡಿ ಮುಂದಿನ ಒಂದು ತಿಂಗಳೊಳಗೆ ಆದಿವಾಸಿಗಳಿಗೆ ನಿವೇಶನ ಹಾಗೂ ವಸತಿಯನ್ನು ಕಲ್ಪಿಸದಿದ್ದಲ್ಲಿ ಎಲ್ಲರು ಒಟ್ಟಾಗಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಕೆ.ಟಿ. ಬಷೀರ್ ಮಾತನಾಡಿ ಸರಕಾರಗಳು ಬಂಡವಾಳಶಾಹಿಗಳ ಪರವಾಗಿವೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮೊಹಮ್ಮದ್ ಮುಸ್ತಫ ಉಪಸ್ಥಿತರಿದ್ದರು