ಚಾಮರಾಜನಗರ: ಕಳೆದ ಕೆಲವು ವರ್ಷಗಳ ಹಿಂದೆ ಭಯೋತ್ಪಾದನೆ ಹಾಗೂ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಮದನಿಯನ್ನು ಕರ್ನಾಟಕದಲ್ಲಿ ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ-ಕೇರಳ ಗಡಿಯಲ್ಲಿ ಪಿಡಿಪಿ ಸಂಘಟನೆ ಸಮಾವೇಶ ನಡೆಸಿ ಮದನಿ ಬಿಡುಗಡೆಗೆ ಆಗ್ರಹಿಸಿತು.
ಕೇರಳದ ಕಾಸರಗೋಡಿನಿಂದ ಕರ್ನಾಟಕ-ಕೇರಳ ಗಡಿ ಮುತ್ತುಂಗದವರೆಗೆ ಪಾದಯಾತ್ರೆ ಮೂಲಕ ಬಂದ ಸಾವಿರಾರು ಮಂದಿ ಪಿಡಿಪಿ ಕಾರ್ಯಕರ್ತರು ಕರ್ನಾಟಕದಲ್ಲಿ ಬಂಧಿಯಾಗಿರುವ ಮದನಿಯವರನ್ನು ವಿನಾಕಾರಣ ಸುಳ್ಳು ಕೇಸ್ ಹಾಕಿ ಬಂಧಿಸಿರುವುದು ಸರಿಯಲ್ಲ ಅವರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ-ಕೇರಳ ಗಡಿ ಭಾಗದಿಂದ ಕರ್ನಾಟಕದೊಳಗೆ ರ್ಯಾಲಿ ನಡೆಸಲು ಉದ್ದೇಶಿಸಿದ್ದ ಪಿಡಿಪಿ ಸಂಘಟನೆಯ ಕನಸಿಗೆ ಕರ್ನಾಟಕ ಪೊಲೀಸ್ ತಣ್ಣೀರು ಎರಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಐನೂರು ಪೊಲೀಸ್ ಸಿಬ್ಬಂದಿಗಳನ್ನು ಕರ್ನಾಟಕ-ಕೇರಳ ಗಡಿಯಲ್ಲಿ ನಿಯೋಜನೆ ಮಾಡಲಾಗಿದ್ದು, ಗುಂಡ್ಲುಪೇಟೆ ಮಾರ್ಗವಾಗಿ ಕೇರಳದ ಕಡೆಗೆ ಹೋಗುವ ಖಾಸಗಿ ವಾಹನಗಳನ್ನು ತೀವ್ರ ತಪಾಸಣೆ ಮಾಡುತ್ತಿತ್ತು, ಕರ್ನಾಟಕದಿಂದ ಕೇರಳದ ಕಡೆ ಹೋಗುವ ಎಲ್ಲ ಖಾಸಗಿ ವಾಹನಗಳನ್ನು ತಡೆಯೊಡ್ಡುತ್ತಿದ್ದರು.
ಗುಂಡ್ಲುಪೇಟೆ ಪ್ರಮುಖ ವೃತ್ತದಲ್ಲೇ ಬ್ಯಾರಿಕೇಡ್ ಗಳನ್ನು ಹಾಕುವ ಮೂಲಕ ಪಿಡಿಪಿ ಕಾರ್ಯಕರ್ತರು ಕರ್ನಾಟಕದೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸಿದ್ದರು. ಕೇರಳದ ಗಡಿ ಭಾಗವಾದ ಮುತ್ತುಂಗದಲ್ಲಿ ಕಣ್ಣೂರಿನ ಶಾಸಕ ಜಯರಾಜ್ ಹಾಗೂ ಪಿಡಿಪಿ ರಾಜ್ಯಾಧ್ಯಕ್ಷ ಸಿದ್ದಖಿ ನೇತೃತ್ವದಲ್ಲಿ ಮದನಿ ಬಿಡುಗಡೆ ಆಗ್ರಹಿಸಿ ಭಾರಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಕೇರಳ ಪೊಲೀಸರು ಹೆಚ್ಚಾಗಿ ಜಮಾಯಿಸಿದ್ದು, ಅಲ್ಲೂ ಸಹ ಮನ್ನೆಚ್ಚರಿಕೆ ಕ್ರಮವಾಗಿ ಆಂಬುಲೆನ್ಸ್ ವಾಹನವನ್ನು ಸಹ ನಿಲ್ಲಿಸಿಕೊಳ್ಳಲಾಗಿತ್ತು.
ಪಿಡಿಪಿ ಸಂಘಟನೆಯ ಕಾರ್ಯಕರ್ತರು ಕರ್ನಾಟಕದೊಳಗಿನಿಂದ ಬೆಂಗಳೂರಿನ ತನಕ ರ್ಯಾಲಿ ಮೂಲಕ ತೆರಳಿ ಮದನಿ ಬಿಡುಗಡೆಗೆ ಆಗ್ರಹಿಸುವ ಉದ್ದೇಶ ಹೊಂದಿತ್ತು. ಕರ್ನಾಟಕ ರಾಜ್ಯದಲ್ಲಿ ಈ ರ್ಯಾಲಿಯಿಂದ ಶಾಂತಿ ಭಂಗವಾಗುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಧ್ಯಾಹ್ನ ಆರಂಭವಾದ ಸಮಾವೇಶ ಸಂಜೆಯಾದರೂ ಮುಕ್ತಾಯವಾಗದೆ ಇರುವುದರಿಂದ ಮುತ್ತುಂಗ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರು ಆಗಮಿಸಿ ಜಮಾಯಿಸಿದೆ. ಕರ್ನಾಟಕ ಕೇರಳದ ಗಡಿ ಭಾಗವಾದ ಕರ್ನಾಟಕದ ಮೂಲೆ ಹೊಳೆ ಬಳಿ ಕರ್ನಾಟಕ ಪೊಲೀಸ್ ಸಿಬ್ಬಂದಿ ಜಮಾಯಿಸಿದ್ದು, ಕರ್ನಾಟಕದೊಳಗೆ ಪಿಡಿಪಿ ಕಾರ್ಯಕರ್ತರು ಬರದಂತೆ ತಡೆಯೊಡ್ಡಲು ಸಜ್ಜಾಗಿದ್ದಾರೆ.