ಕೆ.ಆರ್.ಪೇಟೆ: ಪಟ್ಟಣದ ಆಶೀರ್ವಾದ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ಸಮಾವೇಶ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹೆಚ್.ಎನ್.ಚಂದ್ರಶೇಖರ್ ಅವರು ವಿದ್ಯಾರ್ಥಿಗಳು ಪಠ್ಯದಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಿದರೆ ಪರಿಣಾಮಕಾರಿಯಾದ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಯಲ್ಲಿ ಬಂಧಿಸಿ ಕೇವಲ ಓದಿಗೆ ಆಧ್ಯತೆ ನೀಡಿದರೆ ಅದು ಗುಣಮಟ್ಟದ ಶಿಕ್ಷಣವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಪ್ರತಿಭಾಕಾರಂಜಿ ಹಾಗೂ ನಲಿ-ಕಲಿ ಕಾರ್ಯಕ್ರಮಗಳಿಂದ ಮಕ್ಕಳನ್ನು ಶಾಲೆಯತ್ತ ಸುಲಭವಾಗಿ ಆಕರ್ಷಣೆ ಮಾಡಲು ಸಾಧ್ಯ ಎಂದರು. ಪ್ರತಿಭಾವಂತ ಮಕ್ಕಳಿಗೆ ಬಹುಮಾತ ವಿತರಣೆ ಮಾಡಿ ಮಾತನಾಡಿದ ಪಟ್ಟಣದ ಬಾಲಏಸು ದೇವಾಲಯದ ಫಾದರ್ ವಂದನೀಯ ಆಂತೋನಿರಾಜ್ ಅವರು ಹೆಚ್ಚು ಪೋಷಕರು ಮಕ್ಕಳಿಗೆ ಆಸ್ತಿ, ಹಣವನ್ನು ಸಂಪಾದನೆ ಮಾಡಿಕೊಡುವ ಬದಲು ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಈ ಮೂಲಕ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಮಕ್ಕಳು ಶಾಲೆಯಲ್ಲಿ 6ಗಂಟೆ ಇದ್ದರೆ ಮನೆಯಲ್ಲಿ 18ಗಂಟೆಗಳ ಕಾಲ ಪೋಷಕರ ಬಳಿ ಇರುತ್ತಾರೆ ಇವರ ಕಲಿಕೆಯ ಜವಾಬ್ದಾರಿ ಪೋಷಕರ ಮೇಲೆ ಹೆಚ್ಚು ಇರುತ್ತದೆ ಏಕೆಂದರೆ ಶಿಕ್ಷಕರು ನೂರಾರು ಮಕ್ಕಳ ಪೈಕಿ ಒಂದೊಂದು ಮಗುವನ್ನು ಪ್ರತ್ಯೇಕವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಳೆದ 25ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಹಿರಿಯ ಶಿಕ್ಷಕ ಹರೀಶ್ ಮತ್ತು ಶಾಲಾ ಮಹಿಳಾ ಸಿಬ್ಬಂದಿ ಶ್ರೀಮತಿ ಮೇರಿ ಅವರನ್ನು ಫಲತಾಂಬೂಲ ನೀಡಿ ಅಭಿನಂದಿಸಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಪ್ರಮೀಳಾ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರನ್ನು ರಂಜಿಸಿದವು.