ಹಿರೀಕ್ಯಾತನಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ರಾಮನಾಥಪುರ-ತೆರಕಣಾಂಬಿ ರಾಜ್ಯ ಹೆದ್ದಾರಿ 88ರ ಬಳಿಯ ಶೀರೇನಹಳ್ಳಿ ಗ್ರಾಮದ ಸಮೀಪ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಆನಂದ, ಲೋಕೇಶ, ಸೂರಿ, ಮಂಜು, ಸುರೇಶ, ಪುನೀತ್, ರವಳೇಶ್, ಕುಮಾರ್ ಹಾಗೂ ಟ್ರ್ಯಾಕ್ಟರ್ ಚಾಲಕ ತ್ಯಾಗರಾಜ್ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ. ಇವರ ಪೈಕಿ ಕೆಲವರಿಗೆ ಕೈ ಕಾಲು ಮುರಿದಿದ್ದರೆ, ಇನ್ನು ಕೆಲವರ ತಲೆ ಹಾಗೂ ಎದೆ ಭಾಗಗಳಿಗೆ ತೀವ್ರ ಪೆಟ್ಟಾಗಿದೆ.
ಕೆ.ಆರ್.ನಗರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ರೈತರು ಹಾಗೂ ಕೂಲಿಕಾರ್ಮಿಕರು ಹುಣಸೂರು ತಾಲೂಕಿನ ಗದ್ದೆಬಯಲಿನಲ್ಲಿ ರಾಸುಗಳಿಗೆ ಭತ್ತದ ಹುಲ್ಲನ್ನು ಖರೀದಿಸಿ ತರಲು ತೆರಳುತ್ತಿದ್ದಾಗ ಕೆಎ 45 ಹೆಚ್ 5943 ಸಂಖ್ಯೆಯ ಟ್ರ್ಯಾಕ್ಟರ್ ರಸ್ತೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಮಗುಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದವರು ಟ್ರ್ಯಾಲಿಯ ಕೆಳಗೆ ಸಿಲುಕಿ ಕೊಂಡರು.
ಅವರನ್ನು ಮತ್ತೊಂದು ಟ್ರ್ಯಾಕ್ಟರ್ನ ಇಂಜಿನ್ ನಿದ್ದ ಟ್ರ್ಯಾಲಿಯಿಂದ ಎತ್ತಿ ರಕ್ಷಣೆ ಮಾಡಲಾಯಿತು. ಈ ಸಂದರ್ಭ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಕೈಜೋಡಿಸಿದರು. ಬಳಿಕ ಗಾಯಾಳುಗಳನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.