ಮಡಿಕೇರಿ: ಬರ ಪರಿಹಾರವಾಗಿ ಕೊಡಗು ಜಿಲ್ಲೆಯ ಮೂರೂ ತಾಲ್ಲೂಕುಗಳಿಗೆ ಅಗತ್ಯವಿದ್ದಷ್ಟು ಅನುದಾನವನ್ನು ನೀಡಲು ಸರಕಾರ ಸಿದ್ಧವಿದೆ ಎಂದು ಬರ ಅಧ್ಯಯನದ ಸಚಿವ ಸಂಪುಟ ಉಪ ಸಮಿತಿಯ ಪ್ರಮುಖರಾದ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಬರ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಂಗಾರಿನ ಕೊರತೆಯಿಂದ ಕೊಡಗಿನ ಮೂರು ತಾಲ್ಲೂಕುಗಳನ್ನು ಬರಪಿಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಎಷ್ಟೇ ಪ್ರಮಾಣದ ಅನುದಾನದ ಅಗತ್ಯವಿದ್ದರು ಅದನ್ನು ಪೂರೈಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಬೋರ್ವೆಲ್ ಗಳಿಗೆ ಅವಕಾಶವಿಲ್ಲ. ಹೀಗಿದ್ದೂ ಕುಡಿಯುವ ನೀರಿನ ಸಲುವಾಗಿ ಬೋರ್ವೆಲ್ ಗಳಿಗೆ ಅವಕಾಶವನ್ನು ಒದಗಿಸಲಾಗುತ್ತದೆ. ಇದರಿಂದ ಸಮಸ್ಯೆ ಬಗೆಹರಿಯದಿದ್ದಲ್ಲಿ ಅಗತ್ಯವಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರನ್ನು ಒದಗಿಸಲಾಗುತ್ತದೆಂದು ತಿಳಿಸಿದರು.
ಬರದ ಹಿನ್ನೆಲೆಯಲ್ಲಿ ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಗತ್ಯ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ತಲಾ 60 ಲಕ್ಷದಂತೆ 1.20 ಕೊಟಿ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಮಳೆಯ ಕೊರತೆಯ ಬಗ್ಗೆ ಎಡಿಸಿ ಸತೀಶ್ ಕುಮಾರ್ ಮಾಹಿತಿ ನೀಡಿ ಮಡಿಕೇರಿ ತಾಲ್ಲೂಕಿನಲ್ಲಿ 731 ಮಿಮೀ ಮಳೆಯ ಕೊರತೆಯಾಗಿದ್ದರೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ 632 ಮತ್ತು ವೀರಾಜಪೇಟೆ ತಾಲ್ಲೂಕಿನಲ್ಲಿ 1364 ಮಿಮೀ ಮಳೆಯ ಕೊರತೆ ಉಂಟಾಗಿದೆ. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಬರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನಿಗಾವಹಿಸಲಾಗಿದೆಯೆಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 34 ಗ್ರಾಮಗಳನ್ನು ಗುರುತಿಸಲಾಗಿದೆ. ಫೆಬ್ರವರಿಯವರೆಗೆ ಅಗತ್ಯ ಮಳೆ ಬಾರದಿದ್ದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತಲೆ ದೋರಬಹುದಾಗಿದೆ. ಈಗಾಗಲೇ ಬರ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆಯೆಂದು ತಿಳಿಸಿದರು.
ಸಚಿವರ ಪ್ರಶ್ನೆಯೊಂದಕ್ಕೆ ಜಿಪಂ ಕಾರ್ಯಪಾಲಕ ಅಭಿಯಂತರರು 539 ಕುಡಿಯುವ ನೀರಿನ ಕಾಮಗಾರಿಗಳಿಗೆ 35.24 ಕೋಟಿ ವೆಚ್ಚವಾಗಲಿದೆ. ಇದರಲ್ಲಿ 20 ಕೋಟಿಯಷ್ಟು ಬಳಕೆಯಾಗಿದ್ದು. 15 ಕೋಟಿಯ ಅಗತ್ಯತೆ ಇದ್ದು, ಈ ಬಾರಿ ಲಭ್ಯವಿರುವ 19 ಕೋಟಿಯಲ್ಲಿ 15 ಕೋಟಿ ಹಳೆಯ ಕಾಮಗಾರಿಗಳಿಗೆ ಬಳಕೆಮಾಡಬೇಕಾಗಿದೆಯೆಂದು ತಿಳಿಸಿದರು.
ಜಿಪಂ ಸದಸ್ಯ ಲತೀಫ್ ಮಾತನಾಡಿ, ಬೋರ್ವೆಲ್ ಗೆ ಅವಕಾಶ ನೀಡದಿರುವ ವಿಚಾರದ ಬಗ್ಗೆ ಗಮನ ಸೆಳೆೆದರು. ಇದಕ್ಕೆ ಸಚಿವ ಕಾಗೋಡು ತಿಮ್ಮಪ್ಪ, ಕುಡಿಯುವ ನೀರಿಗಾಗಿ ಬೋರ್ವೆಲ್ ಗಳ ಅಗತ್ಯವಿದ್ದಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿ ಅವಕಾಶ ಕಲ್ಪಿಸಲಾಗುತ್ತದೆಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಸಚಿವ ರಮೇಶ್ ಕುಮಾರ್, ಬೋರ್ವೆಲ್ ಗಳಿರುವಲ್ಲಿ ಅದಕ್ಕೆ ವಿದ್ಯುತ್ ಸಂಪರ್ಕ ಒದಗಿಸದೆ ಇರುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿ, ನೀರಿನ ಯೋಜನೆಗಳಿಗೆ ಕಾಮಗಾರಿಗಳಿಗೆ ಎಷ್ಟು ಹಣದ ಅಗತ್ಯವಿದೆ ಅದನ್ನು ತಿಳಿಸಿ. ಒದಗಿಸುವ ಪ್ರಯತ್ನ ಮಾಡುವುದಾಗಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಹಕಾರ ಸಚಿವ ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಆಹಾರ ಇಲಾಖೆ ಸಚಿವ ಯು.ಟಿ. ಖಾದರ್, ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ, ಡಾ.ರಿಚರ್ಡ್ ವಿನ್ಸೆೆಂಟ್ ಡಿಸೋಜ ಉಪಸ್ಥಿತರಿದ್ದರು.