ಮಂಡ್ಯ: ಇಲ್ಲಿನ ಎಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ಸ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ವಕೀಲರು ಮತ್ತು ವಕೀಲರೇತರರಿಗಾಗಿ ನಡೆದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ವಕೀಲ ಚಿಕ್ಕಸ್ವಾಮಿ ಅವರು 2 ಕೆ.ಜಿ. 200 ಗ್ರಾಂ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಇನ್ನು ವಕೀಲ ಸೋಮ ಅವರು 1 ಕೆಜಿ 700 ಗ್ರಾಂ ತಿಂದು ದ್ವಿತೀಯ ಸ್ಥಾನ ಪಡೆದರೆ, ವಕೀಲ ತಂಡಸನಹಳ್ಳಿ ಶಂಕರೇಗೌಡ 1 ಕೆಜಿ 650 ಗ್ರಾಂ ಮುದ್ದೆ ಉಣ್ಣುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.ಮಹಿಳಾ ವಿಭಾಗದಲ್ಲಿ ವಕೀಲೆ ಶೈಲಜಾ ಅವರು 1 ಕೆ.ಜಿ. 750 ಗ್ರಾಂ ಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಸಾಕಮ್ಮ 1 ಕೆಜಿ 600 ಗ್ರಾಂ ಮುದ್ದೆ ಉಂಡು ದ್ವಿತೀಯ ಸ್ಥಾನವನ್ನು, ಜಯಲಕ್ಷ್ಮಿ ಅವರು 1 ಕೆಜಿ 500 ಗ್ರಾಂ ಮುದ್ದೆ ತಿಂದು ತೃತೀಯ ಸ್ಥಾನಕ್ಕೆ ಸಮಾಧಾನಪಟ್ಟರು.
ಸುಮಾರು 40ಮಂದಿ ಸ್ಪರ್ಧೆಗಳು ಭಾಗವಹಿಸಿದ್ದ ಸ್ಪಧರ್ೆಯಲ್ಲಿ ಮುದ್ದೆಗೆ ನಾಟಿಕೋಳಿ ಸಾರು ಮಾಡಲಾಗಿತ್ತು. ರುಚಿ, ಶುಚಿಯಾಗಿದ್ದ ಮುದ್ದೆಯೂಟವನ್ನು ಸವಿದು ಗೆಲುವು ಗಳಿಸಲು ಸ್ಪರ್ಧೆಗಳು ಬಂದಿದ್ದರೆ, ಅವರನ್ನು ನೋಡಿ ಹುರಿದುಂಬಿಸಲು ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಗೆಲುವು ಸಿಗದಿದ್ದರೂ ಮುದ್ದೆ ಮತ್ತು ನಾಟಿಕೋಳಿ ಸವಿಯುವ ಅವಕಾಶವಂತು ಲಭ್ಯವಾಗಿತ್ತು. ಒಟ್ಟಾರೆ ಸದಾ ಕೋರ್ಟ್, ಕೇಸು ಅಂಥ ಒತ್ತಡದಲ್ಲಿದ್ದ ವಕೀಲರು ಎಲ್ಲ ಮರೆತು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಕ್ಲಬ್ ನ ಅಧ್ಯಕ್ಷರಾದ ಎಸ್.ಕೆ.ಪ್ರಕಾಶ್, ಕಾರ್ಯದರ್ಶಿ ಮಧು, ವಕೀಲ ಹಾಗೂ ನಗರಸಭಾ ಸದಸ್ಯ ಆರ್.ಮಹೇಶ್ ಕೃಷ್ಣ, ವಕೀಲ, ಕಾಂಗ್ರೆಸ್ ಯುವ ಮುಖಂಡ ಗೌರಿಶಂಕರ್ ಹಾಗೂ ಕಾರ್ಯಕಾರಿ ಮಂಡಳಿ ಹಿರಿಯ ನಿರ್ದೇಶಕರಾದ ಕೀಲಾರ ಚಂದ್ರು, ಮೋಹನ್, ಅಕ್ಮಲ್ ಪಾಷ, ರಾಮಚಂದ್ರು, ಆನಂದ್, ನಾಗೇಶ್, ಮಹದೇವ, ಸತೀಶ್ ಮೊದಲಾದವರು ಇದ್ದರು.