ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರು ಇದೀಗ ವನ್ಯಜೀವಿಗಳ ಹಾವಳಿಗೆ ತತ್ತರಿಸಿದ್ದಾರೆ.
ಆಗಾಗ್ಗೆ ಜಮೀನುಗಳಿಗೆ ಲಗ್ಗೆಯಿಡುವ ಕಾಡು ಪ್ರಾಣಿಗಳು ಬೆಳೆಯನ್ನು ತಿಂದು ತುಳಿದು ಹಾಳು ಮಾಡುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ. ಜಮೀನಿನಲ್ಲಿ ವಾಸ್ತವ್ಯ ಹೂಡಿ ಹಗಲು ರಾತ್ರಿ ಎನ್ನದೆ ಕಾದರೂ ಕೆಲವೊಮ್ಮೆ ಕಣ್ಣು ತಪ್ಪಿಸಿ ಜಮೀನಿಗೆ ದಾಳಿಯಿಡುವ ಪ್ರಾಣಿಗಳು ಎಲ್ಲವನ್ನು ತಿಂದು ನಾಶಪಡಿಸುತ್ತಿವೆ.
ಈ ನಡುವೆ ಗೋಪಾಲಸ್ವಾಮಿಬೆಟ್ಟ ವಲಯದ ಕಾಡಂಚಿನ ಹಂಗಳ, ದೇವರಹಳ್ಳಿ, ಕುಣಗಹಳ್ಳಿ ಹಾಗೂ ಗೋಪಾಲಪುರ ಗ್ರಾಮಗಳ ರೈತರ ಜಮೀನುಗಳಿಗೆ ದಿನ ನಿತ್ಯವೂ 7 ಕಾಡಾನೆಗಳನ್ನೊಳಗೊಂಡ ಹಿಂಡು ಹಿಂಡು ಕಷ್ಟಪಟ್ಟು ಬೆಳೆದ ಫಸಲನ್ನು ತಿನ್ನುವುದರೊಂದಿಗೆ ತುಳಿದು ನಾಶಪಡಿಸುತ್ತಿವೆ. ಗೋಪಾಲಸ್ವಾಮಿ ಬೆಟ್ಟದ ಕಾಡಂಚಿನಲ್ಲಿ ಸೌರ ಬೇಲಿಯಿದ್ದರೂ ಅದು ನಿಷ್ಕ್ರೀಯವಾಗಿದೆ. ಜತೆಗೆ ಆನೆಕಂದಕವೂ ಮುಚ್ಚಿ ಹೋಗಿದೆ. ಇದರಿಂದಾಗಿ ಕಾಡಿನಿಂದ ಕಾಡಾನೆಗಳು ಸಾರಾಗವಾಗಿ ರೈತರ ಜಮೀನುಗಳತ್ತ ಧಾವಿಸುತ್ತಿವೆ.
ಹಂಗಳ ಗ್ರಾಮದ ಸಿದ್ದರಾಜು ಎಂಬುವರು ಜಮೀನಿಗೆ ಅಳವಡಿಸಿದ್ದ ಕಲ್ಲುಕಂಬಗಳನ್ನು ಮುರಿದು ಹಾಕಿ ಒಳಗೆ ನುಗ್ಗಿದ ಕಾಡಾನೆಗಳು ಅಲ್ಲಿ ಬೆಳೆದಿದ್ದ ತರಕಾರಿ ಹಾಗೂ ಮುಸುಕಿನ ಜೋಳದ ಫಸಲನ್ನು ತಿಂದು ನಾಶಪಡಿಸಿವೆ. ಆ ನಂತರ ಸಮೀಪದ ದೇವರಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿಗೆ ನುಗ್ಗಿ ಮುಸುಕಿನ ಜೋಳ ಹಾಗೂ ಮೇವಿನ ಮೆದೆಯನ್ನು ನಾಶಪಡಿಸಿವೆ. ಅಲ್ಲಿಗೆ ಸಮಾಧಾನವಾಗದೆ ಹುಚ್ಚಪ್ಪ ಎಂಬುವರಿಗೆ ಮುಸುಕಿನ ಜೋಳ ಹಾಗೂ ಅರಿಶಿಣವನ್ನು ಹಾಳುಗೆಡವಿವೆ.
ಕಾಡಾನೆಗಳು ಮಾತ್ರವಲ್ಲದೆ, ಕಾಡುಹಂದಿಗಳೂ ಜಮೀನಿಗೆ ಬರುತ್ತಿವೆ. ಅವು ಕೂಡ ಜಮೀನಿನಲ್ಲಿ ಬೆಳೆದ ಫಸಲನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಮೇಲುಕಾಮನಹಳ್ಳಿ ಸಮೀಪವಿರುವ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯ ಕಚೇರಿಗೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿಲ್ಲ ಎಂಬ ದೂರು ಗ್ರಾಮದ ರೈತರದ್ದಾಗಿದೆ.
ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡು ವನ್ಯಜೀವಿಗಳ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವರೇ ಎಂಬುವುದನ್ನು ಕಾದು ನೋಡಬೇಕಾಗಿದೆ.