ಸಿದ್ದಾಪುರ: ದಿಡ್ಡಳ್ಳಿಯ ಗುಡಿಸಲು ಕಳೆದುಕೊಂಡ ನಿರಾಶ್ರಿತರ ಹೋರಾಟ ತೀವ್ರಗೊಂಡಿದ್ದು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕರೆ ನೀಡಿದ್ದ ಸಂಕಲ್ಪ ಸಭೆಗೆ ರಾಜ್ಯದ ವಿವಿಧೆಡೆಗಳಿಂದ ನೂರಾರು ಹೋರಾಟಗಾರರು ಪಾಲ್ಗೊಂಡು ಆದಿವಾಸಿಗಳ ಹಕ್ಕಿಗೆ ಬೆಂಬಲ ಸೂಚಿಸಿದರು.
ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವಕಿಲರಾದ ಎ.ಕೆ ಸುಬ್ಬಯ್ಯ, ಸರಕಾರವು ಸ್ವಾಭಿಮಾನದಿಂದ ಬದುಕಲು ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಬೇಕು. ಗಿರಿಜನರು ಜಾಗವನ್ನು ಕೇಳಿ ಪಡೆಯುತ್ತಿಲ್ಲ. ಬದಲಾಗಿ ಹೋರಾಟದ ಮುಖಾಂತರ ಪಡೆಯುತ್ತಿದ್ದೇವೆ ಎಂದ ಅವರು ಬಡಜನರ ಮೇಲೆ ಗಧಾಪ್ರಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಠಿಸಿರುವುದು ಖಂಡನೀಯ. ಸರಕಾರವು ಆದಿವಾಸಿಗಳಿಗೆ ಕೂಡಲೇ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ದಿಡ್ಡಳ್ಳಿಯಲ್ಲಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಜನರು ವಾಸವಾಗಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದು, ಅಧಿಕಾರಿಗಳು ಆದಿವಾಸಿಗಳನ್ನು ಪರಿಶೀಲಿಸಲಿ ಎಂದರು.
ನಂತರ ಮಾತನಾಡಿದ, ನೂರ್ ಶ್ರೀಧರ್, ಜಿಲ್ಲೆಗೆ 5 ಮಂದಿ ಸಚಿವರು ಭೇಟಿ ನೀಡಿ ತೆರಳಿದ್ದಾರೆ. ಸೌಜನ್ಯಕ್ಕೂ ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರನ್ನು ಭೇಟಿ ಮಾಡಿಲ್ಲ. ಹಾಗೆಯೇ ಅಧಿಕಾರಿಗಳು ಕೂಡ ಆಗಮಿಸಲಿಲ್ಲ. ಮಳೆ ಹಾಗೂ ಚಳಿಯಲ್ಲಿ ಕಳೆದ ಒಂದು ವಾರಗಳಿಂದ ಆದಿವಾಸಿಗಳು ಪರದಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಇತ್ತ ಸುಳಿದಿಲ್ಲ ಎಂದರು. ಗಿರಿಜನರು ತೋಟಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದು, ತಮ್ಮ ಬದುಕು ಕಂಡುಕೊಳ್ಳಲು ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿದ್ದರು. ಆದರೇ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಗಿರಿಜನರಿಂದ ಲಂಚ ಪಡೆದು ಬಳಿಕ ಅವರನ್ನು ಏಕಾಏಕಿ ತೆರವುಗೊಳಿಸಿದೆ. ಅಮಾಯಕ ಗಿರಿಜನರಿಗೆ ಭೂಮಿ ಹಾಗೂ ವಸತಿ ಸಿಗುವವರೆಗೂ ಹೋರಾಟ ಮಾಡಲಾಗುತ್ತದೆ. ಈಗಾಗಲೇ ರಾಜ್ಯದ ವಿವಿಧೆಡೆಗಳಿಂದ ಹೋರಾಟಗಾರರು ದಿಡ್ಡಳ್ಳಿಗೆ ಆಗಮಿಸಿದ್ದು, ರಾಜ್ಯಾಂದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ನಿರ್ವಹಣಪ್ಪ ಮಾತನಾಡಿ, ಕೊಡಗಿನ ಕಾಫಿ ತೋಟಗಳಲ್ಲಿ ಅಲ್ಪ ಸಂಬಳಕ್ಕೆ ಜೀತಗಳಾಗಿ ದುಡಿಯುತ್ತಿದ್ದ ಆದಿವಾಸಿಗಳು ತಮಗೆ ಸ್ವಂತ ಸೂರಿನ ಕನಸ್ಸಿನೊಂದಿಗೆ ದಿಡ್ಡಳ್ಳಿಗೆ ಬಂದು ನೆಲೆಸಿದ್ದಾರೆ. ಆದರೇ ಅರಣ್ಯ ಇಲಾಖಾ ಅಧಿಕಾರಿಗಳು ಕಡುಬಡವರಿಂದ ಲಂಚ ಪಡೆದುಕೊಂಡು ಬಳಿಕ ಏಕಾಏಕಿ ಗುಡಿಸಲು ತೆರವುಗೊಳಿಸಿ, ಒಕ್ಕಲೆಬ್ಬಿಸಿದ್ದಾರೆ. ಸರಕಾರಕ್ಕೆ ಬಂಡವಾಳಶಾಹಿಗಳು, ಮಠಗಳಿಗೆ ಭೂಮಿ ನೀಡಲು ಅಧಿಕಾರವಿದೆ. ಆದರೇ ತಮ್ಮ ಬದುಕು ಕಟ್ಟಿಕೊಳ್ಳಲು ನಿವೇಶನ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಆದಿವಾಸಿಗಳ ಹೆಸರಿನಲ್ಲಿ ಕೆಲವು ಸಂಘಟನೆಗಳು ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದು, ಭೂಮಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು. ಜಿಲ್ಲಾಧಿಕಾರಿಗಳು ರಾಜಕಾರಣಿಗಳ ಹಾಗೂ ಭೂಮಾಲಿಕರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಕ್ಷೇತ್ರದ ಶಾಸಕರು, ಸಂಸದರು ಸೇರಿದಂತೆ ಕೆಲ ರಾಜಕಾರಣಿಗಳು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಬಂದ ಹಾಗೆ ದಿಡ್ಡಳ್ಳಿಗೆ ಬಂದು ಮೊಸಳೆ ಕಣ್ಣೀರಿಟ್ಟು ತೆರಳುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳಗ್ಗಿನಿಂದ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ 50 ಕ್ಕೂ ಹೆಚ್ಚು ಸಂಘಟನೆಗಳು ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡಿದ್ದು, ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದು, ತದನಂತರ ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಂಡಗೌಡ, ವಿರಾಜಪೇಟೆ ತಾಹಶೀಲ್ದಾರರಾದ ಮಹದೇವಸ್ವಾಮಿ ಹಾಗೂ ಸಮಾಜಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ ಸ್ಥಳಕ್ಕಾಗಮಿಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ನಿರತರಾಗಿದ್ದ ಆದಿವಾಸಿಗಳು ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆ ಕೂಗಿದರಲ್ಲದೇ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಮಾತನಾಡಿದ ಗಿರಿಜನ ಮುಖಂಡೆ ಮುತ್ತಮ್ಮ, ಗಿರಿಜನರು ಮಳೆಯಲ್ಲಿ ಬೀದಿಯಲ್ಲಿ ವಾಸವಾಗಿದ್ದ ಸಂದರ್ಭ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ನಾವು ಕೂಡ ನಿಮ್ಮಹಾಗೆ ಮನುಷ್ಯರಲ್ಲವೇ ಎಂದು ಪ್ರಶ್ನಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಹಲ್ಲೆ ನಡೆಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಇಷ್ಟೆಲ್ಲಾ ಘಟನೆಗಳು ನಡೆಯುವ ಸಂದರ್ಭ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರಲ್ಲದೇ, ಮಾಯಾದೇವಿ ಗಲಗಲಿ ಇದಕ್ಕೆ ಉತ್ತರಿಸಬೇಕೆಂದು ಪಟ್ಟು ಹಿಡಿದರು.
ಈ ಸಂದರ್ಭ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಯಾವತಿ ಗಲಗಲಿ, ತಾನು ಕಳೆದ ಒಂದು ತಿಂಗಳ ಹಿಂದೆ ಇಲಾಖೆಯಲ್ಲಿ ಅಧಿಕಾರ ಪಡೆದುಕೊಂಡಿದ್ದು, ಬಳಿಕ ದಿಡ್ಡಳ್ಳಿ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಇಲ್ಲಿನ ನಿರಾಶ್ರಿತರಿಗೆ ಕಂದಾಯ ಇಲಾಖೆಯು ಪೈಸಾರಿ ಜಾಗದಲ್ಲಿ ನಿವೇಶನ ನೀಡಿದ್ದಲ್ಲಿ ತಮ್ಮ ಇಲಾಖೆಯಿಂದ ಎಲ್ಲಾ ಸೌಕರ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ತಾನು ಬಂದ ಬಳಿಕ 200 ಹಕ್ಕು ಪತ್ರವನ್ನು ನೀಡಿರುವುದಾಗಿ ಅವರು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡಗೌಡ, ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲೆಯ ವಿವಿಧೆಡೆ ಪೈಸಾರಿ ಜಾಗವನ್ನು ಗುರುತಿಸಿದ್ದು, ನಿರಾಶ್ರಿತರ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಒಂದು ತಿಂಗಳಲ್ಲಿ ಭೂಮಿಯನ್ನು ವಶಪಡಿಸಿ, ನಿರಾಶ್ರಿತರಿಗೆ ಹಂಚಲಾಗುವುದು ಎಂದರು. ಈ ಸಂದರ್ಭ ಪ್ರತಿಭಟನಾಕಾರರು ಪೊಳ್ಳು ಭರವಸೆಗೆ ಬಗ್ಗುವುದಿಲ್ಲ ಎಂದು ಘೋಷಣೆ ಕೂಗಿದರು. ಅಧಿಕಾರಿಗಳ ಭರವಸೆಯನ್ನು ತಿರಸ್ಕರಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರೆಸಿದರು.ಇದೇ ಸಂದರ್ಭ ಆದಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಸಂಕಲ್ಪ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಕೇಂದ್ರಸಮಿತಿ ಸದಸ್ಯ ಸಿರಿಮನೆ ನಾಗರಾಜ್ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಗುರುಶಾಂತ್, ಸದಸ್ಯರಾದ ಮಲ್ಲಿಕ, ನೇಮಿಚಂದ್, ಮಾನವಹಕ್ಕು ಕಾರ್ಯಕರ್ತ ವಸಂತ್, ಸಮಿತಿಯ ಖಜಾಂಜಿ ಕಾವೇರಿ, ಸಿ.ಪಿ.ಐ (ಎಂ) ಜಿಲ್ಲಾ ಕಾರ್ಯದರ್ಶಿ ಡಾ.ದುರ್ಗಪ್ರಸಾದ್, ಕಾಂಗ್ರೆಸ್ ಮುಖಂಡರಾದ ಪಿ.ಸಿ.ಹಸೈನಾರ್, ಆರ್.ಕೆ.ಸಲಾಂ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಸಿನ್, ಶಿವಮೊಗ್ಗದ ಹೋರಾಟಗಾರ ಕಿರಣ್ ಗಾಜನೂರು, ಮಹೇಂದ್ರ, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಮೂರ್ತಿ, ರಂಗಭೂಮಿ ಕಲಾವಿದೆ ಹಾಗೂ ಸಾಹಿತಿ ಡಾ.ವಿಜಯಮ್ಮ, ಪ್ರಗತಿಪರ ಚಳುವಳಿಯ ರಾಜಣ್ಣ, ಮೂಲಭೂತ ಹಕ್ಕುಗಳ ಸಮಿತಿ ಅಧ್ಯಕ್ಷ ಅಣ್ಣಯ್ಯ, ಬುಡಕಟ್ಟು ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷೆ ಜಯಮಾಲ, ಬಹುಜನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಮೇಶ, ರೇವತಿ ಸೇರಿದಂತೆ ರಾಜ್ಯದ 50 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಡಿ.ವೈ.ಎಸ್.ಪಿ ಛಬ್ಬಿ, ವೃತ್ತನಿರೀಕ್ಷ ಮೃದಪ್ಪ, ಎಸ್.ಐ ಸಂತೋಷ್ ಕಶ್ಯಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಂಕಲ್ಪ ಸಭೆಯ ನಿರ್ಣಯಗಳು:
- ನಿರಾಶ್ರಿತರಿಗೆ ದಿಡ್ಡಳ್ಳಿ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ನಿವೇಶನ ನೀಡಬೇಕು. ದಿಡ್ಡಳ್ಳಿಯಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ತಕ್ಷಣವೇ ಊಟ ಹಾಗೂ ವಸತಿ ಸೇರಿದಂತೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕು.
- ಗುಡಿಸಲು ತೆರವುಗೊಳಿಸಿದ ಸಂದರ್ಭ 8 ಮಂದಿಯ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು.
- ರಾಜ್ಯದ ಹಾಗೂ ಎಲ್ಲಾ ಆದಿವಾಸಿಗಳಿಗೆ ಭೂಮಿ ನೀಡಲು ಒತ್ತಾಯ.
- ರಾಜ್ಯದಲ್ಲಿ ಆದಿವಾಸಿಗಳು ಯಾವುದೇ ಜಾಗದಲ್ಲಿ ವಾಸವಾಗಿದ್ದರೂ ಅವರಿಗೆ ಭೂಮಿಯನ್ನು ನೀಡಬೇಕು. ಪೈಸಾರಿ ಹಾಗೂ ಅರಣ್ಯ ಭೂಮಿಯಲ್ಲಿ ಆದಿವಾಸಿಗಳು ವಾಸವಿದ್ದರೇ ಅದನ್ನು ಸಕ್ರಮಗೊಳಿಸಬೇಕು. ಇಲ್ಲವಾದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.