ಕೊಳ್ಳೇಗಾಲ: ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಮಗುಚಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ 15 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ನರೀಪುರ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಂದಿನಂತೆ ಪಟ್ಟಣದಿಂದ ಬೆಳಕವಾಡಿ ಮಾರ್ಗವಾಗಿ ತಲಕಾಡು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್(ಕೆಎ. 16-3389) ಬೆಳಗ್ಗೆ 8.30ರ ಸಮಯದಲ್ಲಿ ಹೊಸಅಣಗಳ್ಳಿ ನಿಲ್ದಾಣದಿಂದ ಮುಂದಕ್ಕೆ ತೆರಳುತ್ತಿದ್ದಾಗ ಎದುರಿನಿಂದ ದಿಢೀರ್ ಆಗಿ ವಾಹನವೊಂದು ಬಂದಿದೆ. ಈ ಸಂದರ್ಭ ಆ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಲುವಾಗಿ ಬಸ್ ಚಾಲಕ ಬ್ರೇಕ್ ಹಾಕಿದ್ದು, ಆಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಬದಿಗೆ ತಲೆಕೆಳಗಾಗಿ ಉರುಳಿ ಬಿದ್ದಿದೆ.
ಪರಿಣಾಮ ಬಸ್ಸಿನಲ್ಲಿದ್ದ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ರಾಜೇಂದ್ರ, ಲಕ್ಷ್ಮೀದೇವಿ, ಓಂಕಾರ್, ದೇವಮ್ಮ, ಮದನ್ಬಾಬು, ನಟೇಶ್, ಶೀಲಾನಾಯ್ಡು, ಕೈವಲ್ಯ, ರಂಗಸ್ವಾಮಿ ಪುಟ್ಟಮ್ಮ, ಹಾಗೂ ಚಾಲಕ ಸಣ್ಣಮಾದಶೆಟ್ಟಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.