ಮಡಿಕೇರಿ: ದಿಡ್ಡಳ್ಳಿಯಲ್ಲಿ ತಾವು ನಿರಾಶ್ರಿತರು ಎಂದು ಹೇಳಿಕೊಂಡು ಪ್ರತಿಭಟನಾ ನಿರತರಾಗಿರುವ 577 ಕುಟುಂಬಗಳ ಸದಸ್ಯರು ಯಾವ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟವರು ಎಂಬುವುದನ್ನು ಮೊದಲು ದಾಖಲೆ ಸಹಿತ ಪತ್ತೆ ಹಚ್ಚಿ ನೈಜ ಫಲಾನುಭವಿಗಳಿಗೆ ಮಾತ್ರ ನಿವೇಶನವನ್ನು ನೀಡಬೇಕೆಂದು ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜೆ.ಪಿ.ರಾಜು ನಿರಾಶ್ರಿತರೆಂದು ಪ್ರತಿಬಿಂಬಿಸಿಕೊಂಡು ಪ್ರತಿಭಟನೆಯಲ್ಲಿ ತೊಡಗಿರುವ 577 ಕುಟುಂಬಗಳಲ್ಲಿ ಬಹುತೇಕರು ಸ್ಥಳೀಯರಲ್ಲವೆಂದು ಅಭಿಪ್ರಾಯಪಟ್ಟರು. ಆರಂಭದಲ್ಲಿ ಕೇವಲ ಸುಮಾರು ನೂರು ಕುಟುಂಬಗಳಷ್ಟೇ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದವು. ಆದರೆ ಇತ್ತೀಚೆಗೆ ಈ ಸಂಖ್ಯೆ ದಿಢೀರ್ ಆಗಿ 577 ಕ್ಕೆ ಏರಿಕೆಯಾಗಿದೆ. ನಿವೇಶನ ಇರುವವರು ಕೂಡ ನಿರಾಶ್ರಿತರೆಂದು ಹೇಳಿಕೊಂಡು ಗುಡಿಸಲು ನಿರ್ಮಿಸಿಕೊಂಡಿದ್ದಾರೆ, ಅಲ್ಲದೆ ಜಿಲ್ಲೆಯ ವಿವಿಧ ಭಾಗ ಹಾಗೂ ಹೊರ ಜಿಲ್ಲೆಯಿಂದಲೂ ಬಂದಿರುವ ಮಂದಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಾಗೂ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದ ಜೆ.ಪಿ.ರಾಜು ತಲೆತಲಾಂತರಗಳಿಂದ ಅರಣ್ಯವಾಸಿಗಳಾಗಿ ಜೀವನ ಸಾಗಿಸುತ್ತಿರುವವರಿಗೇ ಹಕ್ಕು ಪತ್ರ ನೀಡದೆ ಇರುವಾಗ 6 ತಿಂಗಳ ಹಿಂದೆ ಬಂದು ನೆಲೆಸಿರುವವರಿಗೆ ಹೇಗೆ ನೀಡಲು ಸಾಧ್ಯವೆಂದು ಪ್ರಶ್ನಿಸಿದರು. ನೈಜ ಫಲಾನುಭವಿಗಳಿಗೆ ನಿವೇಶನ ನೀಡಿದರೆ ನಮ್ಮ ಅಭ್ಯಂತರವಿಲ್ಲ, ಆದರೆ ನಿಯಮ ಮೀರಿರುವವರಿಗೆ ನಿವೇಶನವನ್ನು ನೀಡುವುದಕ್ಕೆ ಆಕ್ಷೇಪವಿದೆ ಎಂದು ಸ್ಪಷ್ಟಪಡಿಸಿದರು.
ಸಂಕಷ್ಟದ ಬದುಕನ್ನು ಸಾಗಿಸುತ್ತಿರುವ ಗಿರಿಜನರ ಪರವಾಗಿ ಕಳೆದ ಅನೇಕ ವರ್ಷಗಳಿಂದ ಬುಡಕಟ್ಟು ಕೃಷಿಕರ ಸಂಘ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಹೋರಾಟಗಳನ್ನು ಮಾಡಿದೆ. ಆದರೆ ಹೋರಾಟದಿಂದ ಲಭಿಸಿದ ಹಕ್ಕುಗಳನ್ನು ನೀಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಆಡಳಿತ ವ್ಯವಸ್ಥೆ ಮನಸ್ಸು ಮಾಡಿ ಗಿರಿಜನರಿಗೆ ಸಿಗಬೇಕಾದ ಭೂಮಿಯ ಹಕ್ಕನ್ನು ಸಕಾಲದಲ್ಲಿ ನೀಡಿದ್ದರೆ ಈ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ದಿಡ್ಡಳ್ಳಿಯಲ್ಲಿ ರಾಜಕಾರಣ ಮಾಡಲು ರಾಜಕೀಯ ಪಕ್ಷಗಳ ಮುಖಂಡರು ಆಗಮಿಸುತ್ತಿದ್ದಾರೆ. ಕೆಲವು ಡೋಂಗಿ ಗಿರಿಜನ ಮುಖಂಡರು ಗಿರಿಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೆ.ಪಿ.ರಾಜು ಆರೋಪಿಸಿದರು. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಗಿರಿಜನರನ್ನು ಬಳಸಿಕೊಳ್ಳದೆ ಕಾಡನ್ನೇ ಉಸಿರಾಗಿಸಿಕೊಂಡು ಆದಿ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಭೂಮಿಯ ಹಕ್ಕನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.
ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಕೆ.ರಾಮು ಮಾತನಾಡಿ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಈಗ ಗುಡಿಸಲಿದ್ದ ಪ್ರದೇಶದಲ್ಲೇ ನಿವೇಶನ ನೀಡಬೇಕೆನ್ನುವ ಒತ್ತಾಯ ತಪ್ಪು ಎಂದರು. ದಿಡ್ಡಳ್ಳಿ ಸುತ್ತಮುತ್ತಲ್ಲ ಪ್ರದೇಶದಲ್ಲೇ ಸಾಕಷ್ಟು ಪೈಸಾರಿ ಜಾಗವಿದ್ದು, ಇದನ್ನು ಜಿಲ್ಲಾಡಳಿತ ಗುರುತಿಸಿ ನೈಜ ಫಲಾನುಭವಿಗಳಿಗೆ ಹಂಚಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುಮಾರು 577 ಗುಡಿಸಲುಗಳು ನಿರ್ಮಾಣವಾಗುವಲ್ಲಿಯವರೆಗೆ ಅರಣ್ಯ ಅಧಿಕಾರಿಗಳು ಮೌನ ವಹಿಸಿದ್ದು, ಯಾಕೆ ಮತ್ತು ಪ್ರತಿಭಟನಾಕಾರರೆಲ್ಲರೂ ನಿರಾಶ್ರಿತರೇ ಎನ್ನುವ ಬಗ್ಗೆ ತನಿಖೆ ನಡೆಸಬೇಕೆಂದು ಜೆ.ಕೆ.ರಾಮು ಆಗ್ರಹಿಸಿದರು.
ಮುತ್ತಮ್ಮ ಗಡಿಪಾರಿಗೆ ಒತ್ತಾಯ: ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ ಸಿ.ಬಿ.ಹಳ್ಳಿ ಆಶ್ರಮ ಶಾಲೆ ಆವರಣದಲ್ಲಿ ನಿಯಮ ಬಾಹಿರವಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರಿಂದ ಅಶುಚಿತ್ವದ ವಾತಾವರಣ ನಿರ್ಮಾಣವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗಿದೆ ಎಂದು ಅವರು ಆರೋಪಿಸಿದರು.
ಗಿರಿಜನರ ಆಚಾರ, ವಿಚಾರ, ಸಂಸ್ಕೃತಿಗೆ ತನ್ನದೇ ಆದ ಗೌರವವಿದೆ. ಆದರೆ ಕೆಲವರು ಪ್ರತಿಭಟನೆಯ ನೆಪದಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದು, ಗಿರಿಜನ ಸಮುದಾಯಕ್ಕೆ ಅಪಮಾನವಾಗುತ್ತಿದೆ. ಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಅಗೌರವವನ್ನುಂಟು ಮಾಡಿರುವ ಮುತ್ತಮ್ಮ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಮತ್ತು ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚಂದ್ರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸೋಮಯ್ಯ, ಮಹಿಳಾ ಘಟಕದ ಪ್ರಮುಖರಾದ ಶಾಂತಮ್ಮ ಹಾಗೂ ಇಂದಿರಾ ಉಪಸ್ಥಿತರಿದ್ದರು.