ಚಿಕ್ಕಮಗಳೂರು: ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಗಗನಕಸುಮದ ಮಾತು. ಜನಪ್ರತಿನಿಧಿಗಳ ಆಶ್ವಾಸನೆ ಇಲ್ಲಿ ಭರವಸೆಯಾಗಿ ಉಳಿದಿದೆ. ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮವನ್ನು ಮರೆತುಹೋಗುವ, ನಿರ್ಲಕ್ಷ್ಯಧೋರಣೆಯನ್ನು ತೆಗೆದುಕೊಳ್ಳುವ ಅಧಿಕಾರಿಗಳಿಗೆ ವಿದ್ಯಾರ್ಥಿನಿಯೋರ್ವಳು ಶಾಕ್ ನೀಡಿದ್ದಾರೆ.
ಹೌದು ಕುಗ್ರಾಮವೊಂದರ ಅಭಿವೃದ್ಧಿಗೆ ವಿದ್ಯಾರ್ಥಿಯೋರ್ವಳು ಪ್ರಧಾನಿ ಮಂತ್ರಿಗಳಿಗೆ ಬರೆದ ಪತ್ರ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಡಳಿತದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ದಶಕಗಳ ಕಾಲ ನಾಗರೀಕ ಸವಲತ್ತುಗಳನ್ನೇ ಕಾಣದೆ ಕತ್ತಲಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಗಡಿಯಂಚಿನ ಗ್ರಾಮ ಮೂಡಿಗೆರೆ ತಾಲ್ಲೂಕಿನ ಆಲೇಕಾನ್ ಹೊರಟ್ಟಿಯಲ್ಲಿ ಅಭಿವೃದ್ಧಿಯ ಬೆಳಕು ಹರಿಯುವ ನಿರೀಕ್ಷೆ ಸದ್ಯ ಹುಟ್ಟುಹಾಕಿದೆ. ಈ ನಿರೀಕ್ಷೆಗೆ ಕಾರಣವಾಗಿರುವುದು ಈ ಗ್ರಾಮದ ವಿದ್ಯಾರ್ಥಿನಿಯ ನಮನ .
ಅಲೇಕಾನ್ ಗ್ರಾಮದ ಅಭಿವೃದ್ದಿಗೆ ಆಗ್ರಹಿಸಿ 10ನೇ ತಗರತಿಯ ವಿದ್ಯಾರ್ಥಿನಿಯ ನಮನ ಪ್ರಧಾನಿ ಮಂತ್ರಿ ನರೇಂದ್ರ ಮೋದಿಗೆ ಅಕ್ಟೋಬರ್ ನಲ್ಲಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರಧಾನಿ ಮಂತ್ರಿಗಳ ಕಛೇರಿಯ ಸಿಬ್ಬಂದಿಗಳು ಡಿಸೆಂಬರ್ ತಿಂಗಳಿನಲ್ಲಿ ಸ್ಪಂದನೆ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆಯೂ ಈ ಕುರಿತು ವರದಿ ಸಲ್ಲಿಸುವಂತೆಯೂ ಪ್ರಧಾನಿ ಕಚೇರಿಯಿಂದ ಜಿಲ್ಲಾಧಿಕರಿಗಳ ಕಚೇರಿಗೆ ಡಿಸೆಂಬರ್ 6 ರಂದು ಪತ್ರ ಬಂದಿದೆ. ಈ ಗ್ರಾಮದಲ್ಲಿ 36 ಮನೆಗಳಿದ್ದು ಎಲ್ಲರೂ ಪರಿಶಿಷ್ಠ ಪಂಗಡದವರು, ಚಾರ್ಮಾಡಿ ಘಾಟಿಯ ಮುಖ್ಯ ರಸ್ತೆಯಿಂದ ಸುಮಾರು 5 ಕಿ.ಮೀ. ಕಲ್ಲು-ಮಣ್ಣಿನಿಂದ ಕೂಡಿದ ಕಚ್ಚಾರಸ್ತೆಯಲ್ಲಿ ಹೋಗಬೇಕಾಗುತ್ತದೆ. ಹಿಂದಿನಿಂದಲೂ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಭಾರೀ ಪ್ರಯತ್ನ ನಡೆಸಿತ್ತಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿತ್ತು. ಸದ್ಯ ಪ್ರಧಾನ ಮಂತ್ರಿಗಳ ಸೂಚನೆ ಮೇರೆಗಾದರೂ ಗ್ರಾಮಕ್ಕೊಂದಷ್ಟು ಸೌಲಭ್ಯ ಸಿಗಲಿ ಎನ್ನುತ್ತಾರೆ ಸ್ಥಳೀಯರು. ಹೊರಟ್ಟಿ ಗ್ರಾಮಸ್ಥರು ಅನುಭವಿಸುತ್ತಿರುವ ದುಸ್ಥಿತಿಯ ಚಿತ್ರಣ ಪ್ರಧಾನಿಗಳ ಕಚೇರಿಗೆ ತಲುಪಿಸಿದ್ದು ಇದೇ
ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿನಿ ನಮನ. ಮೂಡಿಗರೆ ತಾಲ್ಲೂಕಿನ ಬಿದರಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ನಮನ ವಿದ್ಯುತ್, ದೂರವಾಣಿ, ರಸ್ತೆ, ಇರುವ ಶಾಲೆಗೂ ಬೀಗ ಹಾಕಿರುವ ಸ್ಥಿತಿ, ಅಂಗನವಾಡಿ ಸೇರಿದಂತೆ ಯಾವುದೇ ಸೌಲಭ್ಯಳಿಲ್ಲದೆ ಕತ್ತಲ ಕೂಪದಲ್ಲಿ ಮುಳುಗಿರುವ ಬಗ್ಗೆ ಸುಧೀರ್ಘವಾದ ಪತ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದರು. ಅಲ್ಲದೆ ತಮ್ಮ ನೋವುವನ್ನು ಪತ್ರದ ಮೂಲಕ ವ್ಯಕ್ತಪಡಿಸಿದರು. ಇದಕ್ಕೆ 2ತಿಂಗಳು ತಡವಾದ್ರೂ ಸ್ಪಂದನೆ ಸಿಕ್ಕಿರುವುದು ವಿದ್ಯಾರ್ಥಿನಿ ನಮನರಲ್ಲಿ ಹರ್ಷ ಮೂಡಿಸಿದೆ…ವಿದ್ಯಾರ್ಥಿನಿಯ ಪತ್ರಕ್ಕೆ ಸ್ಪಂಧಿಸಿದ ಪ್ರಧಾನ ಮಂತ್ರಿ ಜಿಲ್ಲಾಧಿಕಾರಿಗಳ ಕಚೇರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಇದರ ಪರಿಣಾಮ ಪ್ರಭಾರಿ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳೂ ಆದ ಡಾ.ರಾಗಪ್ರಿಯ ಸ್ಥಳೀಯ ಆಧಿಕಾರಿಗಳೋಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಕೆಲ ಹಿರಿಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿರುವುದು ಗ್ರಾಮಸ್ಥರಲ್ಲಿ ಅಭಿವೃದ್ದಿಯ ಕನಸು ನನಸುಯಾಗಲಿದ ಎನ್ನುವ ಆಶಾಭಾವನೆ ಮೂಡಿಸಿದೆ. ಒಟ್ಟಾರೆ ಗ್ರಾಮದ ಅಭಿವೃದ್ದಿಗೆ ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಪ್ರಧಾನಿ ಮಂತ್ರಿಗಳ ಕಛೇರಿ ಸ್ಪಂದನೆ ನೀಡಿದೆ. ಅಷ್ಟುಮಾತ್ರವಲ್ಲ ಪ್ರಧಾನ ಕಛೇರಿಯಿಂದ ಪತ್ರ ಬಂದ ಕೂಡಲೇ ಜಿಲ್ಲಾಡಳಿತದಲ್ಲಿ ಇರುವ ಅಧಿಕಾರಿಗಳಲ್ಲಿ ಸಂಚಲನವೇ ಮೂಡಿಸಿದೆ. ಗ್ರಾಮದ ಮುಖವನ್ನೇ ನೋಡಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೂ ಪತ್ರ ಬರೆದಿದ್ದಾರೆ.ಸದ್ಯ ಅಭಿವೃದ್ದಿಯ ಜಪ ಮಾಡುತ್ತಿರುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅದನ್ನು ಯಾವ ರೀತಿ ಕಾರ್ಯಗತ ಮಾಡುವರೇ ಕಾದು ನೋಡಬೇಕಾಗಿದೆ.
ಗೆ,
ನರೇಂದ್ರ ಮೋದಿಜೀ
ಪ್ರಧಾನ ಮಂತ್ರಿಗಳು
ಭಾರತ ಸರ್ಕಾರ
ಪ್ರೀತಿಯ ಪ್ರಧಾನ ಮಂತ್ರಿಗಳಿಗೆ, ನನ್ನ ಹೆಸರು ನಮನ, ನಾನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯ ಗೋಪಾಲಗೌಡ ಎಂಬುವರ ಮಗಳು.. ನಾನು ನನ್ನ ಊರಿನಿಂದ ದಿನನಿತ್ಯ ಹೋಗಿ ಬರಲು ಸಾಧ್ಯವಿಲ್ಲದ ಕಾರಣ ಸುಮಾರು 30 ಕಿಮೀ ದೂರ ಇರುವ ಬಿದರಹಳ್ಳಿ ಎಂಬ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನೀವು ದೇಶದ ಪ್ರಧಾನಿ ಆದ ಬಳಿಕ ಸ್ವಚ್ಛ ಭಾರತ್, ಗ್ರಾಮೀಣ ಅಭಿವೃದ್ಧಿ, ಭ್ರಷ್ಟಚಾರ ನಿರ್ಮೂಲನೆ ಸೇರಿದಂತೆ ಇನ್ನಿತರ ಯೋಜನೆಗಳನ್ನ ಜಾರಿಗೆ ತಂದು ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ದಿನಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನಿಮ್ಮ ಕೆಲಸದ ಬಗ್ಗೆ ಬಂದ ವರದಿಗಳನ್ನ ನೋಡಿ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಈ ಹಿನ್ನೆಲೆಯಲ್ಲೇ ನಾನು ನನ್ನ ಊರು ಕೂಡ ಮಾದರಿ ಗ್ರಾಮ ಆಗಬಹುದಾ ಅನ್ನೋ ನಿರೀಕ್ಷೆ ಇಟ್ಟುಕೊಂಡು ಈ ಪತ್ರವನ್ನ ಬರೆಯುತ್ತಿದ್ದೇನೆ.. ನನ್ನೂರು ಅಲೇಖಾನ್ ಹೊರಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗಡಿಗ್ರಾಮವಾಗಿದ್ದು, ಪಶ್ಚಿಮಘಟ್ಟದ ತಪ್ಪಲು ಚಾರ್ಮಾಡಿ ಘಾಟ್ ಅನ್ನೋ ಪ್ರದೇಶದಲ್ಲಿ ಬರುತ್ತದೆ. ಪ್ರಾಕೃತಿಕವಾಗಿ ನನ್ನೂರು ಸುಂದರವಾಗಿದೆ, ಆದರೆ ಯಾವುದೇ ಅಭಿವೃದ್ಧಿ ಕಾಣದೇ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಸಾರಿಗೆ ಸಮಸ್ಯೆ ಇದ್ದು, ಕೊಟ್ಟಿಗೆಹಾರದಿಂದ ಹೊರಡುವ ಬಸ್ಗಳು ಅಲ್ಲಿ ನಿಲುಗಡೆ ಇಲ್ಲ.. ಕೊಟ್ಟಿಗೆಹಾರದಿಂದ ಆಟೋಗೆ 300ರೂ ಹೆಚ್ಚು ಕೊಟ್ಟು ನಮ್ಮ ಊರು ತಲುಪಬೇಕು. ಹೇಗಾದ್ರೂ ಮಾಡಿ ಯಾವುದಾದ್ರೂ ವಾಹನ ಹತ್ತಿ ನಮ್ಮ ಊರಿನ ಸ್ಟಾಪ್ನಲ್ಲಿ ಇಳಿದ್ರೂ ಕೂಡ ನನ್ನ ಊರಿಗೆ ಮುಖ್ಯ ರಸ್ತೆಯಿಂದ 5 ಕೀಲೋ ಮೀಟರ್ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು.. ಸಮರ್ಪಕವಾದ ರಸ್ತೆ ಕನಸಿನ ಮಾತಾಗಿದೆ.. ಊರಲ್ಲಿ ಪ್ರಾಥಮಿಕ ಶಾಲೆ ಇಲ್ಲ, ಹಾಗಾಗೀ ಮಕ್ಕಳು ಅನಿವಾರ್ಯವಾಗಿ ಚಿಕ್ಕವಯಸ್ಸಿನಲ್ಲೇ ಹೆತ್ತವರ ಪ್ರೀತಿಯನ್ನ ತೊರೆದು ಶಿಕ್ಷಣಕ್ಕಾಗಿ ಊರ ಬಿಡಬೇಕಾದ ಪರಿಸ್ಥಿತಿ ಇದೆ. ನೀವು ಡಿಜಿಟಲ್ ಇಂಡಿಯಾ ಅಂತೀರಿ, ಆದ್ರೆ ನಮ್ಮ ಊರಲ್ಲಿ ಮೊಬೈಲ್ ನೆಟ್ವರ್ಕ್ ಸಿಗೋದೇ ಇಲ್ಲ.. ಕಾಡಿನಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ಕಾಡು ಪ್ರಾಣಿಗಳ ಭೀತಿಯಿಂದ ಜೀವನ ಸಾಗಿಸುತ್ತಿದ್ದೇವೆ. ಯಾರಿಗಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಅವರನ್ನ ಆಸ್ಪತ್ರೆಗೆ ಕರೆತರಲು ಹರಸಾಹಸ ಪಡಬೇಕು. ಹೀಗೆ ಹತ್ತು ಹಲವಾರು ಸಮಸ್ಯೆಗಳ ಅಗರ ನನ್ನ ಊರಲ್ಲಿ ಇದೆ. ದಯವಿಟ್ಟು ತಾವು ಮನಸ್ಸು ಮಾಡಿ ನನ್ನ ಊರನ್ನೂ ಕೂಡ ಮಾದರಿ ಗ್ರಾಮವಾಗಿ ಮಾಡುತ್ತೀರ ಅಂತಾ ಆಶಿಸುತ್ತೇನೆ. ನಿಮ್ಮಿಂದ ಉತ್ತರದ ನಿರೀಕ್ಷೆಯಲ್ಲಿಯೂ ಇದ್ದೀನಿ ಸರ್.
ಇಂತಿ ನಿಮ್ಮ ಪ್ರೀತಿಯ
ನಮನ