ಹಾಸನ: ಮಹಿಳಾ ಸಂಘಗಳಿಗೆ ಸಾಲ ನೀಡಿದ ಖಾಸಗಿ ಹಣಕಾಸು ಸಂಸ್ಥೆಗಳು ಇದೀಗ ಬಡ್ಡಿ ಸಹಿತ ಹಣವನ್ನು ಹಿಂತಿರುಗಿಸುವಂತೆ ಕಿರುಕುಳ ನೀಡುತ್ತಿರುವುದರಿಂದ ನೊಂದ ವಿವಿಧ ಸಂಘಗಳ ಮಹಿಳಾ ಸದಸ್ಯರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಗ್ರಾಮಶಕ್ತಿ, ಎಸ್ಕೆಎಸ್ ಸಂಘ, ಧನಲಕ್ಷ್ಮೀ ಸಂಘ, ಗ್ರಾಮೀಣ ಕೂಟ ಸೇರಿದಂತೆ ಹಲವು ಹೆಸರುಗಳಲ್ಲಿ ಮಹಿಳಾ ಸಂಘಗಳ ಸದಸ್ಯರು ಧರಣಿ ನಡೆಸುತ್ತಿದ್ದು, ಖಾಸಗಿ ಹಣಕಾಸು ಸಂಸ್ಥೆಗಳು ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಾಲ ನೀಡಿ ನಿಯಮ ಮೀರಿ ಬಡ್ಡಿ ವಸೂಲಿ ಮಾಡುತ್ತಿವೆ. ಸಾಲ ಪಡೆದಿರುವುದನ್ನೇ ದುರುಪಯೋಗಪಡಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ನೋಟ್ ಬ್ಯಾನ್ ನಿಂದಾಗಿ ಸರಿಯಾದ ಸಮಯಕ್ಕೆ ಹಣ ಸಿಗದೆ ಸಾಲ ಮರುಪಾವತಿಸಲು ಸಾಧವಾಗುತ್ತಿಲ್ಲ. ಪಡೆದಿರುವ ಸಾಲಕ್ಕೆ ಶೇ.5 ರಿಂದ 10 ಪಟ್ಟು ಹೆಚ್ಚು ಬಡ್ಡಿ ವಿಧಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡದಿದ್ದರೆ ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಬಿಸಾಡುವುದು ಮಹಿಳೆಯರು ಹಾಗೂ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.