ಮಡಿಕೇರಿ: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಹೋರಾಟದಲ್ಲಿ ನಕ್ಸಲರು ಹಾಗೂ ನಿಷೇಧಿತ ಸಂಘಟನೆಗಳ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ ಎಂದು ಬೇಜವಬ್ದಾರಿತನದ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯ ಶಾಸಕರು ಹಾಗೂ ಸಂಸದರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜ್ಹೀದ್ ದಿಡ್ಡಳ್ಳಿ ಹೋರಾಟದಲ್ಲಿ ನಕ್ಸಲರು ಅಥವಾ ನಿಷೇಧಿತ ಸಂಘಟನೆಗಳ ವ್ಯಕ್ತಿಗಳು ಪಾಲ್ಗೊಂಡಿದ್ದರೆ ಅವರನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ಪೊಲೀಸರಿಗೆ ಹಿಡಿದುಕೊಡುವ ಕೆಲಸವನ್ನು ಶಾಸಕರು ಹಾಗೂ ಸಂಸದರು ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಕಳೆದ 3-4 ಬಾರಿಗಳಿಂದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕರು ಆದಿವಾಸಿಗಳ ಪರವಾಗಿ ವಿಧಾನಸಭೆಯಲ್ಲಿ ವಿಷಯ ಮಂಡಿಸಿದ ಒಂದೇ ಒಂದು ಉದಾಹರಣೆಯನ್ನು ನೀಡಲಿ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಆದಿವಾಸಿಗಳಿಗಾಗಿ ಏನು ಸೌಲಭ್ಯ ಕಲ್ಪಿಸಿದ್ದಾರೆ ಎನ್ನುವುದನ್ನು ಪತ್ರಿಕೆಗಳ ಮೂಲಕ ಬಹಿರಂಗ ಪಡಿಸಲಿ ಎಂದು ಅವರು ಸವಾಲು ಹಾಕಿದರು.
ನಿರಾಶ್ರಿತರಾಗಿರುವ ಆದಿವಾಸಿಗಳು ನಕ್ಸಲರಾದರೆ ಅದಕ್ಕೆ ಆಡಳಿತ ನಡೆಸುವವರೇ ನೇರ ಹೊಣೆ ಎಂದು ಆರೋಪಿಸಿದ ಅಬ್ದುಲ್ ಮಜೀದ್ ಶೋಷಿತರ ಸಂವಿಧಾನ ಬದ್ಧವಾದ ಹೋರಾಟಗಳಿಗೆ ಬೆಂಬಲ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದರು. ಅದರಂತೆ ತಮ್ಮ ಪಕ್ಷ ಕೂಡಾ ಪ್ರತಿಭಟನೆಗೆ ಬೆಂಬಲ ನೀಡಿದೆ. ಆದರೆ ಜಿಲ್ಲೆಯ ಶಾಸಕರು ಹಾಗೂ ಸಂಸದರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯವೆಂದು ಟೀಕಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದರು ಹಾಗೂ ಶಾಸಕರು ವಿಷಯ ಪ್ರಸ್ತಾಪಿಸಿದ ಬಳಿಕ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ವಿಧಿಸುವ ಮೂಲಕ ಬಿಜೆಪಿ ಏಜೆಂಟರಂತೆ ವರ್ತಿಸಿದ್ದು, ಗಿರಿಜನರ ನ್ಯಾಯಯುತವಾದ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ನಿಷೇಧಾಜ್ಞೆ ಹಾಗೂ ಕ್ಷುಲ್ಲಕ ಹೇಳಿಕೆಗಳಿಂದ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ನಿರಾಶ್ರಿತರಿಗೆ ನಿವೇಶನ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅಬ್ದುಲ್ ಮಜ್ಹೀದ್ ಸ್ಪಷ್ಟಪಡಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ ದಿಡ್ಡಳ್ಳಿ ಘಟನೆಯಿಂದ ಬಿಜೆಪಿ ಹತಾಶೆಗೊಂಡಿದ್ದು, ಆ ಹಿನ್ನೆಲೆಯಲ್ಲಿ ಅಸಂಬದ್ಧ ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿದರು. ಆದಿವಾಸಿಗಳ ಹೋರಾಟದಿಂದ ಬಿಜೆಪಿ ರಾಜಕೀಯ ಲಾಭವನ್ನು ನಿರೀಕ್ಷಿಸಿತ್ತು. ಆದರೆ ಪ್ರತಿಭಟನಾ ನಿರತ ಆದಿವಾಸಿಗಳು ಪಕ್ಷದ ನಾಯಕರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಹಿಂದೆ ಸರಿದು ನಕ್ಸಲ್ ಹಾಗೂ ನಿಷೇಧಿತ ಸಂಘಟನೆ ಎಂದು ಆರೋಪ ಮಾಡಿ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸುತ್ತಿದೆ ಎಂದು ಟೀಕಿಸಿದರು.
ಆದಿವಾಸಿಗಳಿಗೆ ದಿಡ್ಡಳ್ಳಿಯಲ್ಲೇ ನಿವೇಶನ ನೀಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸೂಚನೆ ನೀಡಿದ್ದರೂ, ಜಿಲ್ಲಾಧಿಕಾರಿಯವರು ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಜಿಲ್ಲಾಧಿಕಾರಿಯವರು ಯಾರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಶೋಷಿತರು, ದುರ್ಬಲರು ಎಲ್ಲೇ ಪ್ರತಿಭಟನೆ ನಡೆಸಿದರೂ, ಅದಕ್ಕೆ ಎಸ್ಡಿಪಿಐ ಬೆಂಬಲ ನೀಡಲಿದ್ದು, ನಿಷೇಧಾಜ್ಞೆಯ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದರು.
ಜಿಲ್ಲೆಯಲ್ಲಿ ಆದಿವಾಸಿಗಳಿಗೆ ನಿವೇಶನ ನೀಡಲು ಇರುವ ಅಡೆತಡೆಗಳೇನು ಎಂಬುವುದನ್ನು ಸಂಸದರು, ಶಾಸಕರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು, ದಿಡ್ಡಳ್ಳಿಯಲ್ಲಿ ಎಷ್ಟು ಹೆಕ್ಟೇರ್ ಸಿ ಮತ್ತು ಡಿ ವರ್ಗದ ಭೂಮಿಯನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ ಎನ್ನುವುದು ಕೂಡ ಬಹಿರಂಗವಾಗಬೇಕೆಂದರು.
ಅಲ್ಲದೆ ಜಿಲ್ಲೆಯ ಸುಮಾರು 7,358 ಎಕರೆ ಪ್ರದೇಶ ಭೂಗಳ್ಳರ ವಶದಲ್ಲಿದೆ ಎಂದು ಸಂಬಂಧಿಸಿದ ಸಚಿವರೇ ವರದಿಯನ್ನು ನೀಡಿದ್ದರೂ ಮತ್ತು ಅದನ್ನು ತೆರವುಗೊಳಿಸಲು ಆದೇಶವಿದ್ದರೂ ಜಿಲ್ಲಾಡಳಿತ ತೆರವು ಕಾರ್ಯಾಚರಣೆಯನ್ನು ಯಾಕೆ ಕೈಗೊಂಡಿಲ್ಲವೆಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷರಾದ ಲಿಯಾಕತ್ ಆಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಉಪಸ್ಥಿತರಿದ್ದರು.