ಮಡಿಕೇರಿ: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದು, ಇದನ್ನು ತಕ್ಷಣ ತೆರವುಗೊಳಿಸುವ ಮೂಲಕ ನಿರಾಶ್ರಿತರ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಧರಣಿ ಕುಳಿತ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳು ಬಿಜೆಪಿ ಹಾಗೂ ಸಂಘ ಪರಿವಾರದ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದರು. ಬಿಜೆಪಿಯ ಶಾಸಕರು ಹಾಗೂ ಸಂಸದರ ಹೇಳಿಕೆಗಳಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಸರ್ಕಾರದ ವಿರುದ್ಧವೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಸಹಾಯಕರ ಪರ ಹೋರಾಟ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಿಡ್ಡಳ್ಳಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವವರು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಿಗರಲ್ಲವೆಂದು ಸಮರ್ಥಿಸಿಕೊಂಡ ಎ.ಕೆ.ಸುಬ್ಬಯ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸ್ವಯಂ ಸೇವಕರು ನಿರಾಶ್ರಿತರ ಪರ ಹೋರಾಟ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಪ್ರತಾಪ ಸಿಂಹ, ಶಾಸಕ ಕೆ.ಜಿ.ಬೋಪಯ್ಯ ನಿರಾಶ್ರಿತರಿದ್ದ ಸ್ಥಳಕ್ಕೆ ಭೇಟಿ ನೀಡಿ, ನಿವೇಶನ ನೀಡಲೇಬೇಕೆಂದು ಒತ್ತಾಯಿಸಿದ್ದರು ಅಲ್ಲದೆ, ಹೋರಾಟಕ್ಕೆ ಬೆಂಬಲವನ್ನೂ ಸೂಚಿಸಿದ್ದರು. ಆದರೆ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಹಾಗೂ ಸಂಸದರು ದಿಡ್ಡಳ್ಳಿಯಲ್ಲಿ ನಕ್ಸಲರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪ ಮಾಡುವ ಮೂಲಕ ಗೊಂದಲದ ರಾಜಕಾರಣ ಮಾಡಿರುವುದು ಖಂಡನೀಯವೆಂದರು. ಪ್ರಗತಿಪರರು ಹಾಗೂ ಜಾತ್ಯತೀತರು ನಡೆಸುತ್ತಿರುವ ಹೋರಾಟ ಪ್ರಜಾತಂತ್ರದ ಶಾಂತಿಮಾರ್ಗದ ಹೋರಾಟವಾಗಿದೆಯೆಂದು ಸ್ಪಷ್ಟಪಡಿಸಿದರು.
ರಕ್ತಪಾತದ ಹೋರಾಟಕ್ಕೆ ಬೆಂಬಲವಿಲ್ಲ:
ನಕ್ಸಲರು ಕೆಟ್ಟವರೆ ಎಂದು ಪ್ರಶ್ನಿಸಿದ ಎ.ಕೆ. ಸುಬ್ಬಯ್ಯ, ತಮ್ಮ ಬದುಕಿಗೆ ಬೆಂಕಿ ಹಚ್ಚಿಕೊಂಡು ಶೋಷಿತರ ಬದುಕಿಗೆ ಬೆಳಕು ನೀಡುವ ಕಾರ್ಯವನ್ನು ನಕ್ಸಲರು ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡ ಎ.ಕೆ. ಸುಬ್ಬಯ್ಯ, ನಕ್ಸಲರ ರಕ್ತಪಾತದ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದರು. ಯಾರೂ ಕೂಡ ನಕ್ಸಲರಾಗಬಾರದೆನ್ನುವ ಉದ್ದೇಶವನ್ನು ಜನಪ್ರತಿನಿಧಿಗಳು ಹೊಂದಿರಬೇಕು ಮತ್ತು ಅಸಹಾಯಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆದರೆ, ಇದ್ಯಾವುದನ್ನೂ ಮಾಡದೆ, ಹೋರಾಟಗಾರರನ್ನು ನಕ್ಸಲರೆಂದು ಪ್ರತಿಬಿಂಬಿಸುತ್ತಿರುವುದು ಖಂಡನೀಯವೆಂದರು.
ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಿ:
ಪ್ರತಿಭಟನೆಯಲ್ಲಿ ಎಸ್ಡಿಪಿಐ ಪಾಲ್ಗೊಂಡಿದೆಯೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಸೇರಿದಂತೆ ಸಂಘ ಪರಿವಾರ ಸೇರಿಕೊಂಡು ದಲಿತರಿಗೆ ನ್ಯಾಯ ಒದಗಿಸಿದರೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸುಬ್ಬಯ್ಯ ತಿಳಿಸಿದರು. ಮತಾಂತರದ ಬಗ್ಗೆ ಮಾತನಾಡುವವರು ಮೊದಲು ದಲಿತರನ್ನು ದೇವಾಲಯದೊಳಕ್ಕೆ ಪ್ರವೇಶ ಮಾಡಿಕೊಳ್ಳಲಿ. ದಲಿತರಿಂದಲೇ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಲಿ ಎಂದು ಕರೆ ನೀಡಿದ ಅವರು ದಲಿತರು ದೇವಾಲಯಕ್ಕೆ ಪ್ರವೇಶ ಮಾಡಬಾರದೆಂದಾದರೆ ಮಸೀದಿ ಅಥವಾ ಚರ್ಚ್ ಗಳಿಗೆ ತೆರಳಲು ಆಕ್ಷೇಪ ವ್ಯಕ್ತಪಡಿಸುವುದು ಯಾಕೆ ಎಂದು ಪ್ರಶ್ನಿಸಿದರು.
ನಿರಾಶ್ರಿತರ ಹೋರಾಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನಕ್ಸಲ್ ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಸಂಘ ಪರಿವಾರದ ಕುತಂತ್ರಕ್ಕೆ ಪ್ರತಿತಂತ್ರ ಮಾಡುವುದಾಗಿ ಎಚ್ಚರಿಕೆ ನೀಡಿದ ಎ.ಕೆ. ಸುಬ್ಬಯ್ಯ, ಷಡ್ಯಂತ್ರದ ರಾಜಕಾರಣವನ್ನು ಜನರು ಸಹಿಸುವುದಿಲ್ಲವೆಂದರು. ಜೀವಂತ ಗಾಂಧಿಯಂತಿರುವ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನೇತೃತ್ವದಲ್ಲೆ ಹೋರಾಟವನ್ನು ಮುನ್ನಡೆಸಲಾಗುವುದೆಂದರು. ಡಿ.23 ರಂದು ಬೃಹತ್ ಸಮಾವೇಶ ನಡೆಸಿ ರಾಜ್ಯದ ಎಲ್ಲಾ ಗಿರಿಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದೆಂದು ಸುಬ್ಬಯ್ಯ ತಿಳಿಸಿದರು.
ಶುಕ್ರವಾರ ನಡೆಯಲಿರುವ ಮಡಿಕೆೇರಿ ಚಲೋ ಪ್ರತಿಭಟನೆಯ ಸಂದರ್ಭ ಮಂಡಿಸಲಿರುವ 5 ಹಕ್ಕೊತ್ತಾಯಗಳ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಚಿತ್ರನಟ ಹಾಗೂ ಹೋರಾಟಗಾರ ಚೇತನ್, ಹೋರಾಟಗಾರರು ಎಲ್ಲೂ ಕಾನೂನನ್ನು ಉಲ್ಲಂಘಿಸದಿದ್ದರು ನಿಷೇದಾಜ್ಞೆಯನ್ನು ಜಾರಿ ಮಾಡಿರುವುದು ಅತ್ಯಂತ ಖಂಡನೀಯವೆಂದರು.
ಕಳೆದ ಮೂರು ವರ್ಷಗಳಲ್ಲಿ ಏನೂ ಕೆಲಸ ಮಾಡದ ಮುಖ್ಯ ಮಂತ್ರಿಗಳು ದಿಡ್ಡಳ್ಳಿ ವಿಚಾರದಲ್ಲಿಯಾದರು ನ್ಯಾಯ ಒದಗಿಸುತ್ತಾರೆ ಎನ್ನುವ ವಿಶ್ವಾಸವಿದೆ. ಕೊಡಗಿನವರೇ ಆದ ಮಾಜಿ ಮುಖ್ಯಮಂತ್ರಿ ದಿ.ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮಂದಿ ಈ ಅಸಹಾಯಕ ಜನರ ಬಗ್ಗೆ ಧ್ವನಿ ಎತ್ತದೆ ಇರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ಅಜೆಂಡಾದ ಬೇರೆ ಬೇರೆ ಪಕ್ಷಗಳಾಗಿವೆಯೆಂದು ಟೀಕಿಸಿದರು.
ಸಮಾಜ ಕಲ್ಯಾಣ ಸಚಿವರಾದ ಆಂಜನೇಯ ಅವರು ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಚೇತನ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಗಿರಿಜನ ಪ್ರಮುಖರಾದ ಸ್ವಾಮಿ ಹಾಗೂ ಅಪ್ಪಾಜಿ ಮಾತನಾಡಿ, ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಹಕ್ಕೊತ್ತಾಯಗಳು:
ಹೋರಾಟ ಸಮಿತಿ ಐದು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿದೆ. ದಿಡ್ಡಳ್ಳಿ ಆದಿವಾಸಿಗಳಿಗೆ ಈ ಹಿಂದೆ ಗುಡಿಸಲುಗಳಿದ್ದ ಸ್ಥಳದಲ್ಲೇ ವಸತಿ ವ್ಯವಸ್ಥೆ ಕಲ್ಪಿಸಬೇಕು, ಬೇಡಿಕೆ ಈಡೇರುವವಲ್ಲಿಯವರೆಗೆ, ತಾತ್ಕಾಲಿಕ ಶೆಡ್ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕು, ಡಿ.7 ರಂದು ಅಮಾನುಷವಾಗಿ ಗುಡಿಸಲುಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಹಾಗೂ ಕಾರ್ಯಾಚರಣೆಗೆ ಆದೇಶ ಮಾಡಿದ ಜಿಲ್ಲಾಧಿಕಾರಿ ಮತ್ತು ನಿರ್ಲಕ್ಷ್ಯ ತೋರಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಯನ್ನು ಅಮಾನತುಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕು, ಕೊಡಗಿನಲ್ಲಿರುವ ಎಲ್ಲಾ ಶೋಷಿತ ವರ್ಗಕ್ಕೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಾಗೂ ವಸತಿ ಒದಗಿಸಬೇಕು, ಬಡಜನರು ವಾಸಿಸುತ್ತಿರುವ ಸ್ಥಳದಿಂದ ಒಕ್ಕಲೆಬ್ಬಿಸಬಾರದು, ಮೇಲ್ಕಂಡ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವ, ಅರಣ್ಯ ಸಚಿವ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆದಿವಾಸಿ ಮುಖಂಡರ ಉನ್ನತ ಮಟ್ಟದ ಸಭೆೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಸಮಿತಿಯ ಪ್ರಮುಖರಾದ ಸಿರಿಮನೆ ನಾಗರಾಜು, ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್, ಪಿ.ಆರ್. ಭರತ್, ಸಿಪಿಐಎಂಎಲ್ ನ ನಿರ್ವಾಣಪ್ಪ, ಎಸ್ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜ್ಹೀದ್, ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಆಲಿ, ನಗರಸಭಾ ಸದಸ್ಯರುಗಳಾದ ಮನ್ಸೂರ್, ಕೆ.ಜಿ.ಪೀಟರ್, ಕಾರ್ಮಿಕ ಸಂಘಟನೆಗಳ ಪ್ರಮುಖರಾದ ರಮೇಶ್, ಮಹದೇವ್, ಜಿ.ಪಂ ಮಾಜಿ ಸದಸ್ಯೆ ಕಾವೇರಿ, ಸಮಿತಿಯ ಕಂದೆಗಾಲ್ ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.