ಮಡಿಕೇರಿ: ಮೀಸಲು ಅರಣ್ಯ ಪ್ರದೇಶದಲ್ಲಿ ಗಿರಿಜನ ನಿರಾಶ್ರಿತರಿಗೆ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದೆ ಇರುವುದರಿಂದ ಪರ್ಯಾಯ ವ್ಯವಸ್ಥೆಯ ಮೂಲಕ ಶೀಘ್ರ ವಸತಿ ಸೌಲಭ್ಯ ಕಲ್ಪಿಸಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಭರವಸೆ ನೀಡಿದ್ದಾರೆ.
ಮಾಲ್ದಾರೆ ಸಮೀಪದ ದಿಡ್ಡಳ್ಳಿಗೆ ಭೇಟಿ ನೀಡಿದ ಅವರು ನಿರಾಶ್ರಿತರನ್ನು ಭೇಟಿಯಾಗಿ ಸಮಸ್ಯೆಯನ್ನು ಆಲಿಸಿದರು. ನಂತರ ಮಾತನಾಡಿದ ಅವರು ಕಾನೂನು ವ್ಯಾಪ್ತಿಯಲ್ಲಿ ಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿದು ಮನೆ ನಿರ್ಮಾಣ ಮಾಡುವುದಾಗಲಿ ಹಾಗೂ ಬಡಾವಣೆ ನಿರ್ಮಾಣ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ನಿರಾಶ್ರಿತರಿಗೆ ಕಂದಾಯ ಇಲಾಖೆಗೆ ಒಳಪಡುವ ಸರಕಾರಿ ಭೂಮಿಯಲ್ಲಿ ತ್ವರಿತ ಗತಿಯಲ್ಲಿ ಸರಕಾರದ ವತಿಯಿಂದ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.
ಆದಿವಾಸಿಗಳು ತಲತಲಾಂತರಗಳಿಂದ ಅರಣ್ಯದಲ್ಲಿ ವಾಸಿಸುತ್ತಿದ್ದು, ಅರಣ್ಯವನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. ಕೆಲವರು ಕಾಫಿ ತೋಟಗಳಲ್ಲಿ ದುಡಿಯುತ್ತಿದ್ದು, ಇದೀಗ ಸ್ವಂತ ಸೂರಿನ ಬಗ್ಗೆ ಬೇಡಿಕೆಯನ್ನು ಇಟ್ಟಿದ್ದಾರೆ. ಕಾನೂನಾತ್ಮಕವಾಗಿ ಶಾಶ್ವತ ಸೂರನ್ನು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಆದಿವಾಸಿಗಳ ಅಭಿವೃದ್ಧಿಗೆ ಹಾಗೂ ಮನೆ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುವುದು ಸರಕಾರದ ಸಂಕಲ್ಪವಾಗಿದ್ದು, ಒತ್ತುವರಿ ತೆರವುಗೊಳಿಸಿ ನಿರಾಶ್ರಿತರಿಗೆ ಸಮಾರೋಪದಿಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಸೂರು ನಿರ್ಮಿಸಿಕೊಡಲಾಗುವುದು ಎಂದರು. ಈಗಾಗಲೇ ನಿರಾಶ್ರಿತರು ತಾತ್ಕಾಲಿಕವಾಗಿ ವಾಸವಾಗಿರುವ ಪ್ರದೇಶವು ಗಿರಿಜನ ಆಶ್ರಮ ಶಾಲೆಯ ಸಮೀಪದಲ್ಲೇ ಇದ್ದು, ಶಾಲೆಗೆ ಹಾಗೂ ಓದುವ ಮಕ್ಕಳಿಗೆ ತೊಂದರೆಯಾಗಿರುವ ಬಗ್ಗೆ ದೂರುಗಳು ಬರುತ್ತಿದೆ. ಆದ್ದರಿಂದ ತಕ್ಷಣ ಶಾಶ್ವತ ನಿವೇಶನ ಒದಗಿಸಿ, ಸ್ಥಳಾಂತರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಗಿರಿಜನ ಮುಖಂಡ ಜೆ.ಕೆ ಅಪ್ಪಾಜಿ ಮಾತನಾಡಿ, ಆದಿವಾಸಿಗಳು ಅರಣ್ಯದಲ್ಲೇ ಬೆಳೆದು, ಅರಣ್ಯವನ್ನು ರಕ್ಷಿಸಿಕೊಂಡು ಬಂದಿದ್ದಾರೆ. ತಾವು ಕಳೆದ ಆರು ತಿಂಗಳಿನಿಂದ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದು, ನಮಗೆ ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಗುಡಿಸಲನ್ನು ಜೆ.ಸಿ.ಬಿ ಮೂಲಕ ಕೆಡವಿ ಹಾಕಿದ್ದಾರೆ. ಅರಣ್ಯ ಅಧಿಕಾರಿಗಳು ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಆದಿವಾಸಿಗಳಿಂದ ಪ್ರತಿ ಕುಟುಂಬದಿಂದ ವಾರಕ್ಕೆ 100 ರೂ. ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಅನುಸೂಚಿತ ಜಾತಿ ಹಾಗೂ ಪಂಗಡ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಶಿವಮೂರ್ತಿ ಮಾತನಾಡಿ, ರಾಜ್ಯದಲ್ಲಿ 58 ದಾಖಲೆರಹಿತ ಗ್ರಾಮಗಳಿದ್ದು, ಸರಕಾರದ ವಿವಿಧ ಯೋಜನೆಗಳಿದ್ದರೂ ಅಭಿವೃದ್ಧಿಯಾಗಿಲ್ಲ. ಬಹುತೇಕರು ಅನಕ್ಷರಸ್ಥರು, ಬಡವರೇ ಇದ್ದು, ಇವರ ಅಭಿವೃದ್ಧಿಗೆ ವಿಶೇಷ ಕಾನೂನಿನ ಅವಶ್ಯಕತೆ ಇದೆ. ಎಸ್.ಸಿ-ಎಸ್.ಟಿ ಕಲ್ಯಾಣ ಸಮಿತಿ ಮುಂದಿನ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಹೊಸ ಕಾಯ್ದೆಯನ್ನು ರೂಪಿಸಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲಿದೆ ಎಂದರು. ದಿಡ್ಡಳ್ಳಿ ಗಿರಿಜನರ ಸಮಸ್ಯೆಗೆ ಸಚಿವ ಅಂಜನೇಯ ನೇತೃತ್ವದಲ್ಲಿ ಎಸ್ಸಿ, ಎಸ್.ಟಿ ಕಲ್ಯಾಣ ಸಮಿತಿ, ಅಧಿಕಾರಿಗಳು, ಗಿರಿಜನ ಮುಖಂಡರುಗಳು ಹಾಗೂ ಹೋರಾಟಗಾರರೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗಿರಿಜನ ಮುಖಂಡೆ ಮುತ್ತಮ್ಮ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭ ಸಚಿವರಾದ ಪರಮೇಶ್ವರ್ ನಾಯಕ್, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಎಸ್ಸಿ, ಎಸ್ಟಿ ಕಲ್ಯಾಣ ಸಮಿತಿಯ ಶಾಸಕರು, ಜಿಲ್ಲಾಧಿಕರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ನಕ್ಸಲರು ಇಲ್ಲ: ಐ.ಜಿ.ಪಿ ಸ್ಪಷ್ಟನೆ
ಮಾಲ್ದಾರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಕ್ಸಲರು ಇಲ್ಲ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ. ದಿಡ್ಡಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲ್ದಾರೆ ಹಾಗೂ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಯಾವುದೇ ನಕ್ಸಲ್ ಚಟುವಟಿಕೆ ನಡೆಯುತ್ತಿಲ್ಲ. ಹೊರಗಿನವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.