ಮಡಿಕೇರಿ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಡಿಕೇರಿ ಚಲೋ ಬೃಹತ್ ಪ್ರತಿಭಟನಾ ಸಭೆಯಲ್ಲಿ ಆದಿವಾಸಿಗಳ ಪರವಾದ ಮಹತ್ವದ ಹಕ್ಕೊತ್ತಾಯಗಳನ್ನು ಮಂಡಿಸಲಾಗಿದೆ.
ದಿಡ್ಡಳ್ಳಿಯಲ್ಲಿ ನಡೆದ ಗುಡಿಸಲುಗಳ ತೆರವು ಕಾರ್ಯಾಚರಣೆಯನ್ನು ಖಂಡಿಸಿದ ಸಭೆ, ಗುಡಿಸಲುಗಳಿದ್ದ ಪ್ರದೇಶದಲ್ಲೆ ವಸತಿ ಹಾಗೂ ಜಮೀನನ್ನು ನೀಡಬೇಕು, 6.80 ಲಕ್ಷ ರೂ. ಹಣ ಪಡೆದಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಮಹಾದೇವಿ ಗಲಗಲಿ ಅವರನ್ನು ವರ್ಗಾವಣೆ ಮಾಡಿ, ಬೇರೆ ಅಧಿಕಾರಿಯ ಮೂಲಕ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು, ಅರಣ್ಯ ಇಲಾಖೆಯ ಅಧೀನದಲ್ಲಿರುವ ಕಂದಾಯ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಆದಿವಾಸಿಗಳು, ದಲಿತರು ಹಾಗೂ ಕಡು ಬಡ ನಿರಾಶ್ರಿತರಿಗೆ ಹಂಚಬೇಕು, ಆದಿವಾಸಿ ಅರಣ್ಯ ಹಕ್ಕು ಮಸೂದೆಯನ್ನು ತಕ್ಷಣ ಅನುಷ್ಠಾನ ಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಗರದ ಗಾಂಧಿ ಮೈದಾನದ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಚಾಲಕರಾದ ನೂರ್ ಶ್ರೀಧರ್, ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿರುವ ಶೋಷಿತರ ಪರ ಇಡೀ ರಾಜ್ಯವೆ ಎದ್ದು ನಿಂತಿದೆಯೆಂದು ಅಭಿಪ್ರಾಯಪಟ್ಟರು. ಅಸಹಾಯಕತೆ ಮತ್ತು ಆಕ್ರೋಶವೇ ಬೆತ್ತಲೆ ಪ್ರತಿಭಟನೆಗೆ ಕಾರಣವೆಂದ ಅವರು ಸರ್ಕಾರ ಹಾಗೂ ಇಂದಿನ ವ್ಯವಸ್ಥೆ ಅಮಾಯಕರ ಬಟ್ಟೆ ಬಿಚ್ಚಿಸಿದೆಯೆಂದು ಆರೋಪಿಸಿದರು.
ದಿಡ್ಡಳ್ಳಿಯಲ್ಲಿ ಇರುವವರು ಜೀತದ ಕುಡಿಗಳಾಗಿದ್ದು, ಜೀತದಿಂದ ಮುಕ್ತರಾಗಬೇಕು ಮತ್ತು ಸ್ವತಂತ್ರವಾಗಿ ಬದುಕಬೇಕು ಎನ್ನುವ ಕನಸನ್ನು ಹೊತ್ತಿದ್ದಾರೆ. ಬೆಕ್ಕುಗಳಂತೆ ಇದ್ದ ದಿಡ್ಡಳ್ಳಿಯ ಜನ ಇಂದು ಹುಲಿಗಳಾಗಿ ಮಾರ್ಪಟ್ಟಿದ್ದಾರೆ. ಇಲ್ಲಿನ ಆದಿವಾಸಿಗಳು ಜಾಗಕ್ಕಾಗಿ ಹೋರಾಟ ನಡೆಸುತ್ತಿಲ್ಲ, ಬದಲಾಗಿ ಲೈನ್ ಮನೆಯ ಜೀತದಿಂದ ಮುಕ್ತರಾಗಬೇಕು ಎನ್ನುವ ಕಾರಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ನೂರ್ ಶ್ರೀಧರ್ ಅಭಿಪ್ರಾಯಪಟ್ಟರು.
ಆದಿವಾಸಿಗಳಿಗೆ ನಿವೇಶನ ನೀಡಿದರೆ ತೋಟಗಳಲ್ಲಿ ದುಡಿಯಲು ಜೀತದಾಳುಗಳು ಸಿಗುವುದಿಲ್ಲವೆಂದು ಬೆಳೆಗಾರರು ಅರಣ್ಯ ಇಲಾಖೆಯೊಂದಿಗೆ ಶಾಮೀಲಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು, ಕೋಮುವಾದಿ ಶಕ್ತಿಗಳು ಹಾಗೂ ತೋಟ ಮಾಲೀಕರಿಂದಾಗಿ ದಿಡ್ಡಳ್ಳಿಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ನೂರ್ ಶ್ರೀಧರ್ ಆರೋಪಿಸಿದರು. ರಾಜ್ಯದಲ್ಲಿ ಒಡೆದು ಹೋಗಿದ್ದ ಸಂಘಟನೆಗಳು ಒಂದು ಗೂಡಲು ದಿಡ್ಡಳ್ಳಿ ಕಾರಣವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದು, ನಿರಾಶ್ರಿತರಿಗೆ ಮನೆ ನೀಡದೆ ಹೋರಾಟಗಾರರು ಮನೆಗೆ ತೆರಳುವಂತಿಲ್ಲವೆಂದು ಕರೆ ನೀಡಿದರು.
ಹೊರಾಟಗಾರರು ಯಾವುದೇ ಅನ್ಯಾಯವನ್ನು ಮಾಡುತ್ತಿಲ್ಲ. ನ್ಯಾಯಯುತ ಬೇಡಿಕೆಯನ್ನಷ್ಟೆ ಮುಂದಿಟ್ಟಿದ್ದು, ರಾತ್ರೋ ರಾತ್ರಿ ಗುಡಿಸಲುಗಳನ್ನು ನೆಲಸಮಗೊಳಿಸಿ ಆದಿವಾಸಿಗಳನ್ನು ನಿರಾಶ್ರಿತರನ್ನಾಗಿ ಮಾಡಿದ ಕಾರಣಕ್ಕಾಗಿ ಅದೇ ಜಾಗ ಮಂಜೂರು ಮಾಡಬೇಕೆಂದು ಪಟ್ಟು ಹಿಡಿದಿರುವುದಾಗಿ ನೂರ್ ಶ್ರೀಧರ್ ಸ್ಪಷ್ಟಪಡಿಸಿದರು.
ಸಭೆಯನ್ನು ಪ್ರಗತಿಪರ ಚಿಂತಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಸಿರಿಮನೆ ನಾಗರಾಜ್, ಚಿತ್ರ ನಟ ಚೇತನ್, ಜಿ.ಪಂ ಮಾಜಿ ಸದಸ್ಯೆ ಕಾವೇರಿ, ಸಿಪಿಐಎಂ ನ ಎಸ್.ವೈ. ಗುರುಶಾಂತ್, ಸಿಪಿಐಎಂಎಲ್ ನ ನಿರ್ವಾಣಪ್ಪ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ನಗರಸಭಾ ಸದಸ್ಯ ಮನ್ಸೂರ್, ಗಿರಿಜನ ಹೋರಾಟಗಾರರಾದ ಅಮಣ್ಣಿಯಮ್ಮ, ಪದ್ಮ, ರಾಜು, ಯಶೋಧ, ಪುಷ್ಪ, ಕೆ.ಶ್ರೀನಿವಾಸ್, ವಸಂತ, ಬಿ.ಎಸ್. ಪೂಜಾರ, ಸುನೀತ, ನೇಮಿ ಚಂದ್ರ, ಹೇಮಂತ್, ಕೆ.ಆರ್. ವಿದ್ಯಾಧರ್, ವಿಠಲ್ ಹೆಗಡೆ, ಮೋಹನ್ ದಾಸ್, ಜಯಪ್ಪ ಹಾನಗಲ್, ಎಸ್.ಆರ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಹೋರಾಟಗಾರರು ದುರ್ಬಲರ ಪರವಾದ ಕ್ರಾಂತಿಗೀತೆಗಳನ್ನು ಹಾಡಿ ಸರ್ಕಾರದ ಗಮನ ಸೆಳೆದರು ಮತ್ತು ಅಧಿಕಾರಿಗಳ ನಡೆಯನ್ನು ಖಂಡಿಸಿದರು.
ನಗರದಲ್ಲಿ ಬೃಹತ್ ಮೆರವಣಿಗೆ:
ಪ್ರತಿಭಟನಾ ಸಭೆಗೂ ಮೊದಲು ಆದಿವಾಸಿಗಳು ಹಾಗೂ ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಕಾರ್ಯಕರ್ತರು ನಗರದ ರಾಜರ ಗದ್ದುಗೆ ಬಳಿಯಿಂದ ಗಾಂಧಿ ಮೈದಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಎಸ್ಡಿಪಿಐ, ಸಮಾಜವಾದಿ ಪಕ್ಷ, ಬಿಎಸ್ಪಿ, ಜಯ ಕರ್ನಾಟಕ, ಆಮ್ ಆದ್ಮಿ, ದಲಿತ ಸಂಘರ್ಷ ಸಮಿತಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬಹುಜನ ದಲಿತ ಸಂಘರ್ಷ ಸಮಿತಿ ಸೇರಿದಂತೆ ಆದಿವಾಸಿ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳು ಪಾಲ್ಗೊಂಡಿದ್ದವು.