ಮದ್ದೂರು: ಬಹುದಿನಗಳಿಂದ ಹೊಗೆಯಾಡುತ್ತಿದ್ದ ಗ್ರಾಮಸ್ಥರ ಎರಡು ಗುಂಪುಗಳ ನಡುವಿನ ದ್ವೇಷ ಭಾನುವಾರ ರಾತ್ರಿ ಸ್ಫೋಟಗೊಂಡು ಇಬ್ಬರ ಬಲಿಯೊಂದಿಗೆ ಅಂತ್ಯ ಕಂಡ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ನಡೆದಿದೆ.
ಶಸ್ತ್ರಸಜ್ಜಿತ ಗ್ರಾಮಸ್ಥರ ಎರಡು ಗುಂಪುಗಳು ಪರಸ್ಪರ ಹರಿತ ಆಯುಧಗಳಿಂದ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹೊಡೆದಾಟದಲ್ಲಿ ಗ್ರಾಮದ ನಂದೀಶ್ (20) ಮತ್ತು ಮುತ್ತುರಾಜ್ (42) ಎಂಬಿಬ್ಬರು ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡವರನ್ನು ಮಂಡ್ಯದ ಮಿಮ್ಸ್ಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗುಂಪುಘರ್ಷಣೆಗೆ ಕಾರಣ ತಿಳಿದುಬಂದಿಲ್ಲ. ಆದರೆ, ರಾಜಕೀಯ ವೈಷಮ್ಯ ಇರಬಹುದು ಎಂದು ಶಂಕಿಸಲಾಗಿದೆ.
ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಅಲ್ಲಿನ ಬಹುತೇಕ ಪುರುಷರು ಊರುಬಿಟ್ಟು ಹೋಗಿದ್ದಾರೆ. ಮದ್ದೂರು, ಹಲಗೂರು, ಮಳವಳ್ಳಿ, ಕೆ.ಎಂ.ದೊಡ್ಡಿ, ಕೆಸ್ತೂರು, ಕೊಪ್ಪ ಮತ್ತು ಸುತ್ತಲ ಠಾಣೆಗಳಿಂದ ಪೊಲೀಸರನ್ನು ಮತ್ತು ಮೂರು ಜಿಲ್ಲಾ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.