ಕೆ.ಆರ್.ಪೇಟೆ: ಶಾಲೆಗೆ ಹೋಗಿ ಬರುವುದಾಗಿ ಹೊರ ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಬೂಕನಕೆರೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ವಿಠಲಾಪುರ ಗ್ರಾಮದ ಸುರೇಶ್ ಅವರ ಪುತ್ರ ವಿ.ಎಸ್.ಅಜಿತ್(16) ಹಾಗೂ ಬೊಮ್ಮಲಾಪುರ ಗ್ರಾಮದ ಚನ್ನಪ್ಪ ಅವರ ಪುತ್ರ ಬಿ.ಸಿ.ಅರುಣ್ (16) ನಾಪತ್ತೆಯಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಿಬ್ಬರು ಬೂಕನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿ ನಿಲಯದಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಹಾಕಿ ಉಪಹಾರವನ್ನು ಸೇವಿಸಿ ನಂತರ ಶಾಲೆಗೆ ಹೋಗಿದ್ದಾರೆ. ಆದರೆ ಸಂಜೆ 6ಗಂಟೆಯಾದರೂ ವಿದ್ಯಾರ್ಥಿ ನಿಲಯಕ್ಕೆ ಮರಳಿ ಬರಲಿಲ್ಲ.
ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗಿ ವಿದ್ಯಾರ್ಥಿಗಳು ಅಂದು ಶಾಲೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಪೋಷಕರಿಗೆ ವಿಷಯ ತಿಳಿಸಿದಾಗ ಅಲ್ಲಿಗೂ ಹೋಗಿಲ್ಲ. ಇವರಿಬ್ಬರಿಗಾಗಿ ಅವರ ಸ್ನೇಹಿತರು, ಪರಿಚಯಸ್ಥರು ಹಾಗೂ ನೆಂಟರಿಷ್ಟರ ಮನೆಗಳಲ್ಲಿ ಹುಡುಕಿದರೂ ಇದೂವರೆಗೂ ಪತ್ತೆಯಾಗದ ಕಾರಣ ತಾಲೂಕು ಬಿಸಿಎಂ ಅಧಿಕಾರಿ ಈರಪ್ಪಗೌಡ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಂದು ವೇಳೆ ಈ ವಿದ್ಯಾರ್ಥಿಗಳ ಸುಳಿವು ಸಿಕ್ಕಿದಲ್ಲಿ ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08230-262440 ಕರೆ ಮಾಡಿ ಮಾಹಿತಿ ನೀಡಬೇಕೆಂದು ಕೋರಲಾಗಿದೆ.