ಮಡಿಕೇರಿ: ಕೇಂದ್ರ ಸರಕಾರದ ಆರೋಗ್ಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಸ್ಥ ಆರೋಗ್ಯ ಭಾರತವನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕೆಂದು ಶಾಸಕರಾದ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ವೀರಾಜಪೇಟೆ ತಾಲ್ಲೂಕಿನ ಬೊಮ್ಮಾಡು ಗಿರಿಜನ ಕಾಲೋನಿಯಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಷ್ಟ್ರೀಯ ಬಾಲಸ್ವಸ್ಥ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮುಂತಾದ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಸ್ಥ ಆರೋಗ್ಯ ಭಾರತವನ್ನು ನಿರ್ಮಾಣ ಮಾಡೋಣವೆಂದು ಕರೆ ನೀಡಿದರು. ವೈದ್ಯೋ ನಾರಾಯಣೋ ಹರಿ ಎಂಬಂತೆ ವೈದ್ಯರೊಂದಿಗೆ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವಂತೆ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.
ಆರೋಗ್ಯ ಸೌಲಭ್ಯವು ಸಮಾಜದ ಕಟ್ಟಕಟೆಯ ವ್ಯಕ್ತಿಗೂ ಸಿಗುವಂತಾಗಬೇಕು. ಈ ದೃಷ್ಟಿಯಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಕಾರ್ಯ ಶ್ಲಾಘನೀಯವೆಂದರು.