ಚಿಕ್ಕಮಗಳೂರು: ತಾಲ್ಲೂಕಿನ ತೊಂಡವಳ್ಳಿಯ ಗ್ರಾಮ ಠಾಣಾ ಜಾಗದಲ್ಲಿ ಸ್ಥಳೀಯ ದಲಿತರಿಗೆ ನಿವೇಶನ ನೀಡಬೇಕು, ತೇಗೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ತಲಾಂತರದಿಂದ ವಾಸವಾಗಿರುವ 60 ದಲಿತ ಕುಟುಂಬಗಳು ನಿವೇಶನ ಮತ್ತು ಮನೆಯಿಲ್ಲದೆ ಪರದಾಡುತ್ತಿವೆ ಎಂದ ಅವರು ಪರಿಸ್ಥಿತಿ ಹೀಗಿದ್ದರೂ ಮೇಲ್ವರ್ಗದವರ ಒತ್ತಡಕ್ಕೆ ಮಣಿದು ಆ ಜಾಗದಲ್ಲಿ ನಿವೇಶನವನ್ನು ಇತರ ಜಾತಿಯವರಿಗೆ ನೀಡಲು ಸಂಚು ನಡೆಯುತ್ತಿವೆ ಎಂದು ಆರೋಪಿಸಿದರು. ಆ ಜಾಗದಲ್ಲಿ ಈಗಾಗಲೇ ಅನ್ಯ ಜಾತಿಯವರು ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸಬೇಕು ಮೇಲ್ವರ್ಗದವರು ಗ್ರಾಮದ ಎರಡು ಕೆರೆಗಳನ್ನು ಒತ್ತುವರಿ ಮಾಡಿ ಅಕ್ರಮವಾಗಿ ಮಾಡಿರುವ ಕಾಫಿ ತೋಟವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.