ಮಡಿಕೇರಿ: ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಕೊಡಗಿನ ದಿಡ್ಡಳ್ಳಿ ಆದಿವಾಸಿಗಳ ಹೋರಾಟ 18 ದಿನಗಳ ಕಾಲ ನಡೆದು ಸರ್ಕಾರ ಒಂದು ಕೋಟಿ ರೂ. ಅನುದಾನವನ್ನು ಪುನರ್ವಸತಿಗೆ ನೀಡುವುದರ ಮೂಲಕ ಅಂತ್ಯ ಕಂಡಿತ್ತು. ಆದರೆ ಈ ಹೋರಾಟಕ್ಕೆ ಮತ್ತು ಹೋರಾಟ ನಡೆಸಲು ಆದಿವಾಸಿಗಳನ್ನು ಎತ್ತಿಕಟ್ಟಿ ಹೋರಾಟದ ನಾಯಕತ್ವ ವಹಿಸಿದ್ದ ಅಪ್ಪಾಜಿ ಹಾಗೂ ಮುತ್ತಮ್ಮ ಎಂಬುವರ ವಿರುದ್ಧವೇ ಇದೀಗ ಆರೋಪ ಕೇಳಿ ಬರುತ್ತಿದೆ.
ಇಷ್ಟಕ್ಕೂ ದಿಡ್ಡಳ್ಳಿಯಲ್ಲಿ ಸೂರು ಕಳೆದುಕೊಂಡು ಸಂತ್ರಸ್ತರೆಂದು ಹೋರಾಟಕ್ಕೆ ಬಂದಿದ್ದ 577 ಕುಟುಂಬಗಳು ಅಲ್ಲಿಯೇ ನೆಲೆಯೂರಿದ ಕುಟುಂಬಗಳಲ್ಲ. ಅವರು ಬೇರೆ, ಬೇರೆ ಕಡೆ ಜೀವನ ನಡೆಸುತ್ತಿದ್ದರು. ಅವರಿಗೆ ನಿವೇಶನ ನೀಡುತ್ತೇವೆಂದು ಆಮಿಷವೊಡ್ಡಿ ಕರೆ ತರಲಾಗಿದೆ. ಅಷ್ಟೇ ಅಲ್ಲದೆ ಆದಿವಾಸಿಗಳಿಂದ ತಲಾ ಐದು ಸಾವಿರ ರೂ.ನಂತೆ ವಸೂಲಿ ಮಾಡಲಾಗಿದೆ ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ.
ಆದಿವಾಸಿಗಳನ್ನು ಎತ್ತಿಕಟ್ಟಿದವರಿಬ್ಬರು ಅಕ್ಕತಮ್ಮ ಆಗಿದ್ದು, ತಮಗೊಂದು ಸೂರು ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು, ಕೂಡಿಟ್ಟ ಹಣವನ್ನು ನೀಡಿದ್ದರೆ, ಮತ್ತೆ ಕೆಲವರು ತಾವು ಕೆಲಸ ಮಾಡುತ್ತಿದ್ದ ಬೆಳೆಗಾರರ ಬಳಿ ಸಾಲ ತಂದು ನೀಡಿದ್ದಾರೆ ಎನ್ನಲಾಗಿದೆ. ಈ ಹೋರಾಟವನ್ನು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಎಂಬಂತೆ ಬಿಂಬಿಸಲಾಗಿತ್ತು. ಅಷ್ಟೇ ಅಲ್ಲದೆ, ಹೊರಗಿನಿಂದ ಬಂದ ಹೋರಾಟಗಾರರು ಆದಿವಾಸಿಗಳನ್ನು ಕೊಡಗಿನ ಬೆಳೆಗಾರರ ವಿರುದ್ಧವೇ ಎತ್ತಿಕಟ್ಟುವಂತಹ ಮಾತನಾಡಿದ್ದರು.
ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಮತ್ತು 144 ಸೆಕ್ಷನ್ ಜಾರಿ ಮಾಡಿದ್ದಲ್ಲದೆ, ಸಿಸಿಟಿವಿ ಅಳವಡಿಸಿ ಎಲ್ಲ ರೀತಿಯಲ್ಲೂ ಮಾಹಿತಿ ಕಲೆ ಹಾಕಿ ಹೊರಗಿನವರು ಬರದಂತೆ ನಿಗಾ ವಹಿಸಿದ್ದರಿಂದ ಸದ್ಯ ಯಾವುದೇ ತೊಂದರೆಯಿಲ್ಲದಂತೆ ಅಂತ್ಯ ಕಂಡಿದೆ. ಹೋರಾಟ ನಡೆಸಿದ ಬಹುತೇಕ ಆದಿವಾಸಿಗಳು ತಮ್ಮ ಸ್ಥಾನಕ್ಕೆ ಮರಳಿ ತೋಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಹಳಷ್ಟು ವರ್ಷಗಳಿಂದಲೂ ಆದಿವಾಸಿಗಳು ತೋಟ ಕೆಲಸ ಮಾಡಿಕೊಂಡು ಬೆಳೆಗಾರರೊಂದಿಗೆ ಅನೋನ್ಯವಾಗಿದ್ದಾರೆ. ಹೀಗಿರುವಾಗ ಆದಿವಾಸಿಗಳನ್ನು ಬೆಳೆಗಾರರ ವಿರುದ್ಧ ಎತ್ತಿಕಟ್ಟುವ ಸಂಚು ನಡೆದಿತ್ತು ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ನಡುವೆ ಸಣ್ಣ ಬೆಳೆಗಾರರ ಸಂಘ, ಮಾಲ್ದಾರೆ ಗ್ರಾ.ಪಂ. ಆಯೋಜಿಸಿದ್ದ ಆದಿವಾಸಿಗಳು, ಕಾಫಿ ಬೆಳೆಗಾರರ ಸಭೆಯಲ್ಲಿ ಆದಿವಾಸಿಗಳಿಂದ ಹಣ ವಸೂಲಾತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು, ಸರ್ಕಾರ ನೀಡಿರುವ 1 ಕೋಟಿ ರು. ಅನುದಾನ ನಿಜವಾದ ಆದಿವಾಸಿಗಳ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗಬೇಕು, ಹೊರಗಿನ ಸಂಘಟನೆಗಳು ದಿಡ್ಡಳ್ಳಿಯಲ್ಲಿ ನಿರಾಶ್ರಿತರಿಗೆ ತಪ್ಪು ಮಾರ್ಗದರ್ಶನ ನೀಡುತ್ತಾ ಬೆಳೆಗಾರರ ವಿರುದ್ದ ಹೋರಾಟಕ್ಕೆ ಎತ್ತಿ ಕಟ್ಟುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ದಿಡ್ಡಳ್ಳಿಯಲ್ಲಿ ಜಿಲ್ಲಾಡಳಿತ ಸೆ.144 ನ್ನು ಮುಂದುವರೆಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಆದಿವಾಸಿ ಸಂಘಟನೆಯ ನಾಯಕಿ, ಗ್ರಾ.ಪಂ. ಸದಸ್ಯೆ ಇಂದಿರಾ, ಬೇರೆ ಬೇರೆ ಕಡೆಗಳಿಂದ ದಿಡ್ಡಳ್ಳಿಗೆ ಬಂದು ತಾವೂ ಆದಿವಾಸಿಗಳು ಎಂದು ಸುಳ್ಳು ಹೇಳುತ್ತಾ ಸರ್ಕಾರದಿಂದ ಸೌಕರ್ಯ ಪಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಮಾಲ್ದಾರೆ ವ್ಯಾಪ್ತಿಯ ಮೂಲ ಆದಿವಾಸಿಗಳು ಅವಕಾಶ ನೀಡಬಾರದು, ದಿಡ್ಡಳ್ಳಿ ಮಾತ್ರವಲ್ಲ ಜಿಲ್ಲೆಯಾದ್ಯಂತ ಹಲವಾರು ವರ್ಷಗಳಿಂದಲೂ ನಿರಾಶ್ರಿತರಾಗಿಯೇ ಇರುವ ಎಲ್ಲಾ ಆದಿವಾಸಿಗಳಿಗೆ ಸರ್ಕಾರ ಕೂಡಲೇ ಸೂರು ಮತ್ತು ನಿವೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆರು ತಿಂಗಳ ಹಿಂದೆ ಎಲ್ಲಿಂದಲೋ ಬಂದು ದಿಡ್ಡಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದವರ ಬಗ್ಗೆ ಅನುಕಂಪ ತೋರಿಸಿದ ಸರ್ಕಾರಕ್ಕೆ ಜಿಲ್ಲೆಯ ವಿವಿಧೆಡೆ ನೆಲೆ ನಿಂತು ನಿಕೃಷ್ಟವಾಗಿ ಬದುಕು ಸಾಗಿಸುತ್ತಿರುವ ಮೂಲ ಆದಿವಾಸಿಗಳು ಕಾಣುತ್ತಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ ಅಲ್ಲದೆ, ಹೋರಾಟವನ್ನು ಹುಟ್ಟು ಹಾಕಿ ಬೆತ್ತಲೆ ಪ್ರತಿಭಟನೆ ಮಾಡಿದ ಮುತ್ತಮ್ಮ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನು ದಿಡ್ಡಳ್ಳಿಯಲ್ಲಿ ಅಕ್ರಮ ಗುಡಿಸಲು ನಿರ್ಮಿಸಲು ಪ್ರಚೋದನೆ ನೀಡಿ ಬಳಿಕ ಹೋರಾಟ ನಡೆಸಲು ಪ್ರಚೋದನೆ ನೀಡಿದ ನಾಯಕ ಅಪ್ಪಾಜಿ ವಿರುದ್ಧ ತನಿಖೆಯಾಗಬೇಕು. ಹಲವು ಅಕ್ರಮಗಳನ್ನು ಮಾಡಿದ್ದು ಅವುಗಳೆಲ್ಲ ಬಯಲಾಗಬೇಕೆಂದು ಸಭೆ ಆಗ್ರಹಿಸಿದೆ. ಅಷ್ಟೇ ಅಲ್ಲದೆ ಇದೊಂದು ನಕ್ಸಲ್ ರೀತಿಯ ಹೋರಾಟವಾಗಿದ್ದು, ಪ್ರಚೋದನೆ ನೀಡಿದವರ ಬಗ್ಗೆ ನಿಗಾ ವಹಿಸುವಂತೆ ಸಭೆಯಲ್ಲಿ ಹಲವರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಆದಿವಾಸಿ ನಾಯಕರು, ಬೆಳೆಗಾರರು ಪಾಲ್ಗೊಂಡಿದ್ದರು. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.