ಮೂಡಿಗೆರೆ: ಪಟ್ಟಣದ ಬೀದಿಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಮ್ಮನ್ನು ಅಲ್ಲಿಂದ ತೆರವುಗೊಳಿಸಿದ ಪ.ಪಂ ಅಧಿಕಾರಿಗಳು, ನಾವು ಉಣ್ಣುವ ತುತ್ತು ಅನ್ನಕ್ಕೂ ಕಲ್ಲು ಹಾಕಿದ್ದಾರೆ ಎಂದು ಬೀದಿಬದಿಯ ಮಹಿಳಾ ವ್ಯಾಪಾರಿಗಳು ಮಂಗಳವಾರ ತಮ್ಮ ಅಳಲನ್ನು ತೋಡಿಕೊಂಡರು.
ಈ ಬಗ್ಗೆ ಬೀದಿಬದಿಯಲ್ಲಿನ ಹಣ್ಣಿನ ವ್ಯಾಪಾರಿ ಮೋಹನಕುಮಾರಿ ಪತ್ರಿಕಾ ಹೇಳಿಕೆ ನೀಡಿದ್ದು, ತರಕಾರಿ ವ್ಯಾಪಾರಿ ಶಬಾನ, ಗೋಬಿ ಮಂಚೂರು ವ್ಯಾಪಾರಿ ಗೌರಮ್ಮ, ಕಳೆದ ಏಳೆಂಟು ವರ್ಷಗಳಿಂದ ಚರ್ಚ್ ಎದುರಿನ ರಸ್ತೆ ಬದಿ ಹಾಗೂ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಕೈಗಾಡಿ ಇಟ್ಟುಕೊಂಡು ಸಣ್ಣಪುಟ್ಟ ವ್ಯಾಪಾರ ಮಾಡಿ, ಸಂಜೆ ವೇಳೆ ಮನೆಗೆ 2 ಕೆ.ಜಿ.ಅಕ್ಕಿ ತೆಗೆದುಕೊಂಡು ಹೋಗಿ ಊಟ ಮಾಡುತ್ತಿದ್ದೆವು. ಕಳೆದ ಮೂರು ತಿಂಗಳ ಹಿಂದೆ ನಮ್ಮ ವ್ಯಾಪಾರದ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕೆಂಗಣ್ಣು ಬಿದ್ದಿದೆ. ಅಂದಿನಿಂದಲೇ ನಮಗೆ ವ್ಯಾಪಾರ ಮಾಡಲು ಅವಕಾಶ ನೀಡದೆ, ಬಲವಂತವಾಗಿ ತೆರವುಗೊಳಿಸಲಾಗಿದೆ. ಇದರಿಂದ ನಮ್ಮ ಕುಟುಂಬವು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಿಗಳ ಕುಟುಂಬಕ್ಕೆ ಪ.ಪಂ ವತಿಯಿಂದ ಗುರುತಿನ ಚೀಟಿಯನ್ನೂ ಸಹ ಈ ಹಿಂದೆ ನೀಡಲಾಗಿತ್ತು. ಆದರೆ ಯಾವುದನ್ನೂ ಪರಿಗಣಿಸದೆ ಪರ್ಯಾಯ ಜಾಗವನ್ನೂ ತೋರಿಸದೆ ಏಕಾಏಕಿ ನಮ್ಮನ್ನು ತೆರವುಗೊಳಿಸುವ ಮೂಲಕ ನಾವು ಉಣ್ಣುವ ಅನ್ನಕ್ಕೆ ಕಲ್ಲು ಹಾಕಿದ್ದಾರೆ. ತೆರವುಗೊಳಿಸಿದ ನಂತರವೂ ನಾವು ಸುಮಾರು 30 ಮಂದಿ ಬೀದಿಬದಿ ಕೈಗಾಡಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಅನುವು ಮಾಡಿಕೊಡುವಂತೆ ಪ.ಪಂ ಅಧಿಕಾರಿಗಳನ್ನು ಕೇಳಿಕೊಂಡರೂ ಅಧಿಕಾರಿಗಳು ಕಿವಿಗೊಡಲಿಲ್ಲ. ಕೆಲ ಸದಸ್ಯರನ್ನು ಅಂಗಾಲಾಚಿದರೂ ಸದಸ್ಯರು ನಮ್ಮನ್ನು ಮಹಿಳೆಯರೆಂದು ಲೆಕ್ಕಿಸದೆ ಅವಾಚ್ಯವಾಗಿ ನಿಂದಿಸಿ ಕಳುಹಿಸಿದ್ದಾರೆ ಎಂದು ದೂರಿದರು.