ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾನೂನು ಬಾಹಿರವಾಗಿ ಸದಸ್ಯತ್ವ ರದ್ದುಗೊಳಿಸಿರುವ ಕಾಫಿ ಮಂಡಳಿ ಸದಸ್ಯರನ್ನು ಮುಂದಿನ ಅವಧಿಗೆ ಮುಂದುವರೆಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಕಾಫಿ ಮಂಡಳಿ ಸದಸ್ಯ ಡಿ.ಎಂ.ವಿಜಯ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳೆದ ಒಂದೂವರೆ ವರ್ಷಗಳ ಹಿಂದೆ, ಹಿಂದಿನ ಸರ್ಕಾರ ಕಾಫಿ ಮಂಡಳಿಗೆ ನೇಮಕ ಮಾಡಿದ್ದ ಕಾಂಗ್ರೇಸ್ ಸದಸ್ಯರನ್ನು ಕಾನೂನು ಬಾಹಿರವಾಗಿ ರದ್ದುಗೊಳಿಸುವ ಮೂಲಕ ಆ ಸ್ಥಾನಕ್ಕೆ ಬಿಜೆಪಿಗರನ್ನು ನೇಮಕ ಮಾಡಿತ್ತು. ಬೆಳೆಗಾರರ ಸಂಘಟನೆಯಲ್ಲೇ ಇಲ್ಲದವರನ್ನು ಕಾಫಿ ಮಂಡಳಿ ಸದಸ್ಯರನ್ನಾಗಿ ಮಾಡುವ ಮೂಲಕ ಕಾಫಿ ಮಂಡಳಿ ವ್ಯವಸ್ಥೆಯನ್ನು ಹಾಳುಗೆಡವಿತ್ತು.
ನಂತರ ರಾಜ್ಯ ಉಚ್ಚ ನ್ಯಾಯಾಲಯ ಗೆಜೆಟ್ ನೋಟಿಫಿಕೇಷನ್ ತಡೆಹಿಡಿದು ತಡೆಯಾಜ್ಞೆ ನೀಡುವ ಜೊತೆಗೆ ಹಿಂದಿನ ಸದಸ್ಯರನ್ನೇ ಮುಂದುವರೆಸುವಂತೆ ಸೂಚಿಸಿತ್ತು ಎಂದು ಹೇಳಿದರು. ಆದರೂ ಕೇಂದ್ರ ಸರ್ಕಾರ ಕಳೆದ ಒಂದುವರೆ ವರ್ಷದಿಂದ ಉದ್ದೇಶ ಪೂರ್ವಕವಾಗಿ ಕಾಫಿ ಮಂಡಳಿಯ ಸಭೆಗಳನ್ನು ನಡೆಸದೆ ಮತ್ತು ಬೆಳೆಗಾರರಿಗೆ ಕಾಲಕಾಲಕ್ಕೆ ನೀಡಬೇಕಾದ ಸಬ್ಸಿಡಿ ಹಣವನ್ನು ನೀಡದೇ ಕಾಫಿ ಉದ್ಯಮದ ಅವನತಿಗೆ ಕಾರಣವಾಗಿದೆ. ನ್ಯಾಯಾಲಯದಿಂದ ಇದುವರೆಗೆ ಅಂತಿಮ ತೀರ್ಪು ಹೊರಬಂದಿಲ್ಲ. ಆದರೆ ಜ.6ಕ್ಕೆ ಅನರ್ಹಗೊಂಡ ಸದಸ್ಯರ ಅವಧಿ ಮುಗಿಯುತ್ತದೆ. ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣದಿಂದಾಗಿ ಅನರ್ಹಗೊಂಡ ಸದಸ್ಯರು ಮತ್ತು ಕೇಂದ್ರ ಸರ್ಕಾರವೇ ನೇಮಕ ಮಾಡಿದ ಹೊಸ ಸದಸ್ಯರು ಸಹ ಕೆಲಸ ಮಾಡಲಾಗಿಲ್ಲ. ಹೀಗಾಗಿ ಅವಧಿ ಮೊಟಕುಗೊಳಿಸಿದ ಸದಸ್ಯರನ್ನು ಮುಂದಿನ ಅವಧಿಗೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.