ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಹಿತಕರ ಘಟನೆ ಹಾಗೂ ಆತಂಕದ ವಾತಾವರಣದ ಬಗ್ಗೆ ಜಿಲ್ಲೆಗೆ ಸಿಬಿಐ ತಂಡ ಆಗಮಿಸಿ ತನಿಖೆ ನಡೆಸಬೇಕೆಂದು ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಶಾಂತಿ, ಸೌಹಾರ್ದತೆಯಿಂದ ಇಲ್ಲಿಯವರೆಗೆ ಜೀವನ ನಡೆಸಿದ್ದಾರೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳಿಂದ ಮತ್ತು ಕೆಲವು ಸಂಘಟನೆಗಳಿಂದ ಅಶಾಂತಿಯ ವಾತಾವರಣ ಮೂಡುತ್ತಿದೆಯೆಂದು ಆತಂಕ ವ್ಯಕ್ತಪಡಿಸಿದರು. ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶಿಗರು ಹಾಗೂ ಅಸ್ಸಾಮಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗನ್ನು ಪ್ರವೇಶಿಸಿದ್ದು, ಸ್ಥಳೀಯ ಮೂಲ ನಿವಾಸಿಗಳಿಗೆ ಮುಂದೊಂದು ದಿನ ಅಪಾಯ ಕಾದಿದೆಯೆಂದು ಎಚ್ಚರಿಕೆ ನೀಡಿದರು.
ಕೆಲವು ಸಂಘಟನೆಗಳು ಯಾವುದೇ ಘಟನೆಗಳು ನಡೆದರು ಬಿಜೆಪಿ, ಆರ್ ಎಸ್ಎಸ್ ಹಾಗೂ ಸಂಘ ಪರಿವಾರವನ್ನು ದೂಷಿಸುತ್ತಿದ್ದು, ಈ ಸಂಘಟನೆಗಳಿಗೆ ದೇಶ ದ್ರೋಹಿಗಳ ಬೆಂಬಲವಿದೆಯೆಂದು ಆರೋಪಿಸಿದರು. ಪ್ರಚೋದನೆ ನೀಡುತ್ತಿರುವ ಇಂತಹ ಸಂಘಟನೆಗಳಿಗೆ ಅಷ್ಟೊಂದು ದೇಶ ಭಕ್ತಿ ಇದ್ದರೆ ದೇಶ ದ್ರೋಹಿಗಳನ್ನು ಪೊಲೀಸರಿಗೆ ಹಿಡಿದು ಕೊಡಲಿ ಎಂದು ಒತ್ತಾಯಿಸಿದರು.
ಐಗೂರಿನಲ್ಲಿ ಇತ್ತೀಚೆಗೆ ನಡೆದ ಕುರ್ಅನ್ ಸುಟ್ಟ ಪ್ರಕರಣ ಹಾಗೂ ಕಾರಿಗೆ ಬೆಂಕಿ ಹಚ್ಚಿದ ಎರಡೂ ಪ್ರಕರಣಗಳಲ್ಲಿ ಆರ್ ಎಸ್ಎಸ್ ಕೈವಾಡವಿದೆಯೆಂದು ಸಂಘಟನೆಯೊಂದು ಮಾಡಿರುವ ಆರೋಪ ಖಂಡನೀಯವಾಗಿದೆ. ಕುರಾನ್ ಸುಟ್ಟ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ವಕೀಲ ಪದ್ಮನಾಭ ಅವರ ಕಾರು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಮರುದಿನವೇ ಬಿಡುಗಡೆ ಮಾಡಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಒಂದು ಪಂಗಡದ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಮಣಿ ಉತ್ತಪ್ಪ, ಈ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಒತ್ತಾಯಿಸಿದರು.
ಪ್ರಕರಣಗಳ ಬಗ್ಗೆ ಸಾಕಷ್ಟು ಗೊಂದಲಗಳಿರುವುದರಿಂದ ಸಿಬಿಐ ತನಿಖೆ ನಡೆಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ತಾಲ್ಲೂಕು ಪಂಚಾಯ್ತಿ ಸದಸ್ಯರೊಬ್ಬರು ಕಪ್ಪು ಹಣವನ್ನು ಬಿಳಿ ಮಾಡುವ ಆರೋಪವನ್ನು ಎದುರಿಸುತ್ತಿದ್ದು, ಇವರಲ್ಲಿ ಪತ್ತೆಯಾದ ನಿಯಮ ಬಾಹಿರ ಹಣದ ಬಗ್ಗೆ ಇಲ್ಲಿಯವರೆಗೆ ಯಾವುದೇ ತನಿಖೆ ನಡೆಯದಿರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದ ಅವರು ಈ ಪ್ರಕರಣವನ್ನು ಕೂಡ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ದಿಡ್ಡಳ್ಳಿಯಲ್ಲಿ ಇರುವ ಮೂಲ ಆದಿವಾಸಿಗಳಿಗೆ ನಿವೇಶನ ನೀಡಬೇಕೇ ಹೊರತು, ಬಾಂಗ್ಲಾ ಅಥವಾ ಅಸ್ಸಾಂನಿಂದ ಬಂದವರಿಗೆ ನೆಲೆ ಒದಗಿಸಬಾರದೆಂದರು. ನಕ್ಸಲ್ ಚಟುವಟಿಕೆಯ ಹಿನ್ನೆಲೆಯುಳ್ಳ ಕೆಲವು ವ್ಯಕ್ತಿಗಳು ಆದಿವಾಸಿಗಳ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಪೊಲೀಸರು ತಕ್ಷಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಮಣಿ ಉತ್ತಪ್ಪ, ಕಳೆದ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಜೀವನ ಸಾಗಿಸುತ್ತಿರುವ ತೋಟದ ಮಾಲೀಕರು ಹಾಗೂ ಕಾರ್ಮಿಕರ ನಡುವೆ ಹುಳಿ ಹಿಂಡುವ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯ ಜನ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.
ಕೂಲಿ ಕೆಲಸಕ್ಕಾಗಿ ಜಿಲ್ಲೆಗೆ ಬಂದ ಬಾಂಗ್ಲಾ ಹಾಗೂ ಅಸ್ಸಾಂ ವಲಸಿಗರು ಸ್ಥಳೀಯರನ್ನೆ ಬೆದರಿಸುವಷ್ಟು ಮುಂದುವರೆದಿದ್ದು, ಮೂಲ ನಿವಾಸಿಗಳು ಜಾಗೃತರಾಗಬೇಕೆಂದು ಮಣಿ ಉತ್ತಪ್ಪ ಹೇಳಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ ಸಿಂಹ ಅವರಿಗೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.