ಮಡಿಕೇರಿ: ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿರುವ ಘಟನೆ ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ವಡ್ಡರಕಾಡು ತೋಟದಲ್ಲಿ ನಡೆದಿದೆ.
ಚೆಲುವ (42) ಎಂಬುವವರೇ ಮೃತ ದುರ್ದೈವಿ. ಕಾಫಿ ಚೀಲಗಳನ್ನು ತರಲು ಐವರು ಟ್ರಾಕ್ಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಕಾಡಾನೆ ದಿಢೀರ್ ಪ್ರತ್ಯಕ್ಷವಾದಾಗ ಚಾಲಕ ಸೇರಿದಂತೆ ಇತರರು ಓಡಲಾರಂಬಿಸಿದರು. ಆದರೆ ಕಾಡಾನೆ ದಾಳಿಗೆ ಸಿಲುಕಿಕೊಂಡ ಚೆಲುವ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರು.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗೋಪಾಲ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ತುರ್ತು ಪರಿಹಾರವಾಗಿ ರೂ.2 ಲಕ್ಷದ ಚೆಕ್ ನ್ನು ಹಸ್ತಾಂತರಿಸಲಾಯಿತು.
ಸಿದ್ದಾಪುರ ವ್ಯಾಪ್ತಿಯ ವಡ್ಡರಕಾಡು, ಬೀಟಿಕಾಡು ಸೇರಿದಂತೆ ಸುತ್ತಮುತ್ತಲ ಖಾಸಗಿ ತೋಟಗಳಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ತಕ್ಷಣ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.