ಮಡಿಕೇರಿ: ಆಧಾರ್ ಕಾರ್ಡ್ ಪ್ರಕ್ರಿಯೆ ನಡೆಸಲು ನಿಯೋಜಿಸಿಕೊಂಡಿದ್ದ ಗುತ್ತಿಗೆ ಆಧಾರದ ಯುವ ಸಿಬ್ಬಂದಿಗಳಿಗೆ ಖಾಸಗಿ ಸಂಸ್ಥೆಯೊಂದು ವೇತನ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿರುವ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ, ಜಿಲ್ಲೆಯ ತಾಲ್ಲೂಕು ಕಛೇರಿಗಳು ಸೇರಿದಂತೆ ವಿವಿಧೆಡೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದ ಯುವ ಸಿಬ್ಬಂದಿಗಳಿಗೆ ವೇತನ ನೀಡದೆ ವಂಚಿಸಲಾಗಿದೆಯೆಂದು ಆರೋಪಿಸಿದರು.
ವೇತನ ಕೇಳಿದವರಿಗೆ ಬೆದರಿಕೆ ಒಡ್ಡಿರುವ ಸಂಸ್ಥೆ ಈ ಹಿಂದೆ ಕಾರ್ಯ ನಿರ್ವಹಿಸಿದವರಿಗೆ ವೇತನವನ್ನು ನೀಡದೆ, ನೂತನ ಸಿಬ್ಬಂದಿಗಳನ್ನ ನಿಯೋಜನೆ ಮಾಡಿಕೊಂಡಿದ್ದಾರೆ. ವೇತನ ಕೇಳುವ ಸಿಬ್ಬಂದಿಗಳನ್ನು ಹುದ್ದೆಯಿಂದ ಕೈಬಿಡುತ್ತಿದ್ದು, ಸಿಬ್ಬಂದಿಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಹುದ್ದೆಗೆ ಸೇರ್ಪಡೆಗೊಳಿಸುವ ಸಂದರ್ಭ 15 ಸಾವಿರ ರೂ. ವೇತನ ನಿಗದಿ ಮಾಡಿ, ಪಿಎಫ್ ನ್ನು ಕಡಿತಗೊಳಿಸಿ 12,500 ರೂ.ಗಳನ್ನು ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು.
ಆದರೆ, ತಿಂಗಳಾನುಗಟ್ಟಲೆ ದುಡಿಸಿಕೊಂಡ ಸಂಸ್ಥೆ ವೇತನ ನೀಡದೆ ಹುದ್ದೆಯಿಂದ ತೆಗೆದು ಹಾಕಿದೆ. ಸುಮಾರು 22 ಸಿಬ್ಬಂದಿಗಳು ನಿರುದ್ಯೋಗಿಗಳಾಗಿದ್ದು, ಜಿಲ್ಲೆಯ ಬಹುತೇಕ ಕಡೆ ಆಧಾರ್ ಪ್ರಕ್ರಿಯೆ ಕುಂಠಿತ ಗೊಂಡಿದೆಯೆಂದು ಬಬ್ಬೀರ ಸರಸ್ವತಿ ಆರೋಪಿಸಿದರು. ಈ ಪ್ರಕರಣದಲ್ಲಿ ಸಂಬಂಧಿಸಿದ ಇಲಾಖೆಯೂ ಶಾಮೀಲಾಗಿರುವ ಬಗ್ಗೆ ಶಂಕೆ ಇದೆಯೆಂದು ಆರೋಪಿಸಿದ ಅವರು, ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ತಮ್ಮಯ್ಯ ಹಾಗೂ ದಿಲೀಪ್ ಉಪಸ್ಥಿತರಿದ್ದರು.