ಚಾಮರಾಜನಗರ: ಖಾಸಗಿ ಶಾಲೆಗಳತ್ತ ಜನರಿಗೆ ವ್ಯಾಮೋಹ ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರದೆ ಮುಚ್ಚುವ ಹಂತಕ್ಕೆ ತಲುಪುತ್ತಿವೆ ಎಂದು ಬೊಬ್ಬೆ ಹೊಡೆಯುವವರು ಕೊಳ್ಳೇಗಾಲ ತಾಲೂಕಿನ ಹನೂರು ವಲಯದ ಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಯನ್ನೊಮ್ಮೆ ಇಣುಕಿ ನೋಡಿದರೆ ಪೋಷಕರು ಏಕೆ ಸರ್ಕಾರಿ ಶಾಲೆಯನ್ನು ತೊರೆದು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.
ಗುಂಡಿಬಿದ್ದ ನೆಲ, ಕಿತ್ತು ಬೀಳುವ ತಾರಸಿ, ಮುರಿದ ಕಿಟಕಿ, ಬಾಗಿಲುಗಳು, ನೀರು, ವಿದ್ಯುತ್, ಬಾಗಿಲು ಇಲ್ಲದ ಶೌಚಾಲಯ ಹೀಗೆ ಹತ್ತಾರು ಸಮಸ್ಯೆಗಳು ಈ ಶಾಲೆಯಲ್ಲಿ ಕಣ್ಣಿಗೆ ರಾಚುತ್ತದೆ. ಜತೆಗೆ ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಲು ಸಾಧ್ಯನಾ ಎಂಬ ಪ್ರಶ್ನೆಯೂ ಮೂಡುತ್ತದೆ. ಪ್ರತಿಯೊಬ್ಬ ತಂದೆ ತಾಯಿಯೂ ತನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು, ಒಳ್ಳೆಯ ಶಾಲೆಯಲ್ಲಿ ಕಲಿಯಬೇಕು ಎಂದು ಬಯಸುತ್ತಾರೆ ಹೀಗಿರುವಾಗ ಈ ಶಾಲೆಯಲ್ಲಿ ಓದಿಸಬೇಕೆಂದರೆ ಪೋಷಕರಿಗೆ ಧೈರ್ಯ ಬೇಕು. ಕಾರಣ ಕಿತ್ತು ಹೋದ ಛಾವಣಿ ಯಾವಾಗ ಬೇಕಾದರೂ ಮಕ್ಕಳ ತಲೆಗೆ ಬಿದ್ದರೆ ಅಚ್ಚರಿಪಡುವಂತಹದ್ದೇನಿಲ್ಲ.
ಈ ವ್ಯಾಪ್ತಿಯಲ್ಲಿ ವಾಸ ಮಾಡುವ ಹೆಚ್ಚಿನವರು ಬಡವರಾಗಿರುವುದರಿಂದ ತಮ್ಮ ಮಕ್ಕಳನ್ನು ಮಂಗಲ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದು, 1ನೇ ತರಗತಿಯಿಂದ 8ನೇ ತರಗತಿಯವರೆಗೆ ಸುಮಾರು 173 ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯವಿಲ್ಲದೆ ಕಲಿಯುತ್ತಿದ್ದಾರೆ. ಗುಂಡಿಬಿದ್ದ ನೆಲ, ಬಯಲು ಶೌಚಾಲಯ, ಕಿಟಿಕಿ, ಬಾಗಿಲುಗಳಿಲ್ಲದ ತರಗತಿ, ಯಾವಾಗ ಬೇಕಾದರೂ ಬೀಳಬಹುದಾದ ಮೇಲ್ಛಾವಣಿ, ಬಾರದ ನೀರು ಹೀಗೆ ಸಮಸ್ಯೆಗಳ ನಡುವೆ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಶಿಕ್ಷಕರಿಗೂ ಸೌಲಭ್ಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿ ಸುಸ್ತಾಗಿದೆ. ಹಾಗಾಗಿ ಮಕ್ಕಳಿಗೆ ಪಾಠ ಮಾಡುತ್ತಾ ಕರ್ತವ್ಯ ಪಾಲಿಸುತ್ತಾರೆ.
ಶಾಲಾ ವ್ಯಾಪ್ತಿಗೆ ಒಳಪಡುವ ಜನಪ್ರತಿನಿಧಿಗಳು ಶಾಲೆಯ ಬಗ್ಗೆ ಕಾಳಜಿ ವಹಿಸಿದಂತೆ ಕಂಡು ಬರುತ್ತಿಲ್ಲ. ಪರಿಣಾಮ ಗ್ರಾಮಸ್ಥರು ಮತ್ತು ಶಿಕ್ಷಕರು ಮೂಲಸೌಕರ್ಯ ಕಲ್ಪಿಸಿಕೊಡಿ ಎಂದು ಅಂಗಲಾಚುತ್ತಿದ್ದರೂ ಅದಕ್ಕೆ ಕಿಮ್ಮತ್ತು ಇಲ್ಲದಾಗಿದೆ. ಸರ್ಕಾರಿ ಶಾಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ಮಂದಿ ಈ ಶಾಲೆಗೊಂದಿಷ್ಟು ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುವ ಮೂಲಕ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರಬೇಕಿದೆ.
ಇಲ್ಲದೆ ಹೋದರೆ ಈ ಶಾಲೆಯತ್ತ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸದೆ ಮುಚ್ಚಿ ಹೋದರೂ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಲೆಗೆ ತೆರಳಿ ಸಮಸ್ಯೆಯನ್ನು ಹತ್ತಿರದಿಂದ ನೋಡಿ ಬಗೆಹರಿಸಿಕೊಡಲಿ.