ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ರಾಜಾಸೀಟಿನಲ್ಲಿ ನೆರೆದ ಅಸಂಖ್ಯ ಪ್ರವಾಸಿಗರು 2016ಕ್ಕೆ ಕೈಬೀಸಿ, ಶಿಳ್ಳೆಹೊಡೆದು ವಿದಾಯ ಹೇಳಿದರು.
ಪ್ರಕರತೆ ಕಳೆದುಕೊಂಡು ರಕ್ತದ ಚೆಂಡಿನಂತೆ ಹೊಳೆಯುತ್ತಿದ್ದ ಸೂರ್ಯ ಬೆಟ್ಟಗುಡ್ಡಗಳ ನಡುವೆ ಲೀನನಾಗುತ್ತಿರುವ ದೃಶ್ಯವನ್ನು ಕಂಡು ಕುಣಿದಾಡಿದ ಜನ ಸಣ್ಣಗೆ ಮೈಕೊರೆಯುವ ಚಳಿಯಲ್ಲಿ ಹಳೆಯ ವರ್ಷಕ್ಕೆ ಕುಣಿದಾಡುತ್ತಾ ವಿದಾಯ ಹೇಳಿದರು.
ಈ ಬಾರಿ ಹಲವು ವಿದ್ಯಮಾನಗಳಿಂದ ಬೇಸತ್ತಿದ್ದ ಮಂದಿ ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳನ್ನಿಟ್ಟುಕೊಂಡು ಮಧ್ಯರಾತ್ರಿವರೆಗೆ ಕಾದರಲ್ಲದೆ, 12 ಆಗುತ್ತಿದ್ದಂತೆಯೇ ಹ್ಯಾಪಿ ನ್ಯೂ ಇಯರ್ ಎನ್ನುತ್ತಾ ಒಬ್ಬರಿಗೊಬ್ಬರು ಶುಭಾಶಯವನ್ನು ಹೇಳುತ್ತಾ ಸಂಭ್ರಮಿಸಿದರು.
ಈ ಬಾರಿ ನೂತನ ವರ್ಷವನ್ನು ಕೊಡಗಿನಲ್ಲಿ ಅಸಂಖ್ಯ ಪ್ರವಾಸಿಗರು ಆಚರಿಸಿದ್ದು ಕಂಡು ಬಂತು. ಇಲ್ಲಿನ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಲ್ಲಿ ಬೀಡುಬಿಟ್ಟಿದ್ದ ಪ್ರವಾಸಿಗರು ಹೊಸ ವರ್ಷವನ್ನು ಹೊಸ ಅನುಭವದೊಂದಿಗೆ ಬರಮಾಡಿಕೊಂಡರು.
ಇನ್ನು ಶನಿವಾರ ಬೆಳಿಗ್ಗೆಯಿಂದಲೇ ಕೊಡಗಿನತ್ತ ಆಗಮಿಸಿದ ಪ್ರವಾಸಿಗರು ಸಂಜೆ ಮಡಿಕೇರಿಯ ರಾಜಾಸೀಟಿನಲ್ಲಿ ನೆರೆದು ಸೂರ್ಯಾಸ್ತಮಾನದ ಸುಂದರ ಕ್ಷಣಗಳಿಗಾಗಿ ಕಾದು ಕೂತರಲ್ಲದೆ ಸೂರ್ಯಾಸ್ತಮಾನದ ಕ್ಷಣಗಳನ್ನು ಅನುಭವಿಸಿ ತೃಪ್ತಿಪಟ್ಟರು.
ಪಟ್ಟಣ, ನಗರಗಳಲ್ಲಿ ನೆಲೆಸಿದ್ದ ಸಹಸ್ರಾರು ಮಂದಿ ಕಾಫಿ ತೋಟಗಳಲ್ಲಿರುವ ಹೋಂಸ್ಟೇಗಳಲ್ಲಿ ಬೀಡು ಬಿಟ್ಟು ಸುಂದರ ಪರಿಸರದಲ್ಲಿ ಹೊಸವರ್ಷವನ್ನು ಆಚರಿಸಿದರು.
ಒಟ್ಟಾರೆ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಹೊಸ ವರ್ಷದ ಸಂಭ್ರಮ ಎಲ್ಲರ ಮುಖದಲ್ಲಿ ಮಿನುಗುತ್ತಿದೆ.