ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸೇರಿದಂತೆ ನಾಲ್ವರನ್ನು ಪಿರ್ಯಾದಿದಾರರನ್ನನಾಗಿ ಪರಿಗಣಿಸಬೇಕೆ ಎನ್ನುವುದಕ್ಕೆ ಸಂಬಂಧಿಸಿದಂತೆ ಶನಿವಾರ ನಡೆಯಬೇಕಿದ್ದ ನ್ಯಾಯಾಲಯದ ವಿಚಾರಣೆ ಜನವರಿ 28ಕ್ಕೆ ಮುಂದೂಡಲ್ಪಟ್ಟಿದೆ.
ನಗರದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಪ್ರಕರಣ ನಡೆಯಬೇಕಿತ್ತಾದರು ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ರಜೆಯಲ್ಲಿರುವುದರಿಂದ ಪ್ರಕರಣವನ್ನು ಅಡಿಷನಲ್ ಜೆಎಂಎಫ್ಸಿಗೆ ವರ್ಗಾಯಿಸಲಾಗಿದೆ. ಆದರೆ, ಆ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ಬಾಬು ಅವರು ರಜೆಯಲ್ಲಿರುವುದರಿಂದ ಪ್ರಕರಣವನ್ನು ಮುಂದೂಡಲಾಗಿದೆ.
ಕಳೆದ ಸೆ.29 ರಂದು ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಅವರು, ಪ್ರಕರಣದ ಕುರಿತು ಸಿಐಡಿ ಸಲ್ಲಿಸಿದ್ದ ‘ಬಿ’ ಶೀಟ್ ವರದಿಗೆ ಸಮ್ಮತಿ ಸೂಚಿಸುವ ಮೂಲಕ ಪ್ರಕರಣದಿಂದ ಹಿಂದಕ್ಕೆ ಸರಿದಿದ್ದರು. ಆದರೆ, ಗಣಪತಿ ಅವರ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರುಗಳು, ಒಟ್ಟು ಪ್ರಕರಣದಲ್ಲಿ ತಮ್ಮನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸುವಂತೆ ವಕೀಲರಾದ ಸುಮಂತ್ ಪಾಲಾಕ್ಷ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.
ಪ್ರಕರಣದಲ್ಲಿ ಈ ನಾಲ್ವರನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸುತ್ತಾರೋ ಇಲ್ಲವೋ ಎನ್ನುವುದು ಇಂದಿನ ವಿಚಾರಣೆಯಿಂದ ಹೊರಬೀಳಬಹುದೆನ್ನುವ ಕುತೂಹಲ ಮನೆಮಾಡಿತ್ತು. ಆದರೆ, ವಿಚಾರಣೆ ಮುಂದೂಡಲ್ಪಟ್ಟಿರುವುದರಿಂದ ಅಲ್ಲಿಯವರೆಗೆ ಕಾಯಲೇಬೇಕಾಗಿದೆ.
ಗಣಪತಿ ಅವರ ತಂದೆ ತಾಯಿಯನ್ನು ಒಳಗೊಂಡಂತೆ ನಾಲ್ವರನ್ನು ಪ್ರಕರಣದಲ್ಲಿ ಪಿರ್ಯಾದಿದಾರರನ್ನಾಗಿ ಪರಿಗಣಿಸಿದಲ್ಲಿ ಪ್ರಕರಣ ಮತ್ತೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಒಂದೊಮ್ಮೆ ಪ್ರಕರಣದ ಪಿರ್ಯಾದಿದಾರರನ್ನಾಗಿ ತಂದೆ ತಾಯಿ ಮತ್ತು ನಾಲ್ವರನ್ನು ಪರಿಗಣಿಸದಿದ್ದಲ್ಲಿ ಡಿವೈಎಸ್ಪಿ ಗಣಪತಿ ಪ್ರಕರಣಕ್ಕೆ ಪೂರ್ಣ ವಿರಾಮ ಬೀಳುತ್ತದೆ.