ಮಡಿಕೇರಿ: ಹಸಿರ ಪರಿಸರದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ಇದೆಯಾದರೂ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದ್ದಾರೆ.
2015-20ರ ಪ್ರವಾಸೋದ್ಯಮ ನೀತಿಯಡಿಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ ಅನುಮೋದನೆ ನೀಡುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಘಟಕಗಳ ಸ್ಥಾಪನೆ ಸಂದರ್ಭ ಪರಿಸರಕ್ಕೆ ದಕ್ಕೆಯಾಗದ ರೀತಿಯಲ್ಲಿ ವಿಶೇಷ ಗಮನಹರಿಸುವುದು ಅಗತ್ಯವೆಂದರು. ಪ್ರವಾಸೋದ್ಯಮ ನೀತಿಯಡಿಯಲ್ಲಿ ಅನುಮೋದನೆ ಪಡೆಯುವ ವಿವಿಧ ಪ್ರವಾಸಿ ಘಟಕ ಅಥವಾ ರೆಸಾರ್ಟ್ ಗಳ ಸ್ಥಾಪನೆಯ ಸಂದರ್ಭ ಪರಿಸರ ಕಾಳಜಿ ಅಗತ್ಯ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿನ ಪ್ರವಾಸಿ ಘಟಕಗಳ ಸ್ಥಾಪನೆಯ ಸಂದರ್ಭ ಮರಗಿಡಗಳನ್ನು ಸಂರಕ್ಷಿಸುವುದರೊಂದಿಗೆ ತ್ಯಾಜ್ಯ ವಿಲೇವಾರಿ ಘಟಕ ಸಂಸ್ಕರಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಇಚ್ಛಿಸುವ ಅರ್ಹ ಸಂಸ್ಥೆಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹೂಡಿಕೆ ಸಹಾಯಧನವನ್ನು ನೀಡಲು ಸರ್ಕಾರ ಉದ್ದೇಶಿಸಿದೆ. ಈ ಬಗ್ಗೆ ಅರ್ಹ ಉದ್ದಿಮೆದಾರರಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂದು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಜಿಲ್ಲೆಯಲ್ಲಿ ರೆಸಾರ್ಟ್, ಹೋಮ್ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಗೊಳ್ಳುತ್ತಿರುವುದರಿಂದ ಪರಿಸರ ಸಮತೋಲನದತ್ತ ವಿಶೇಷ ಆಸಕ್ತಿ ವಹಿಸಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಘಟಕಗಳಿಗೆ ಪರವಾನಗಿ ನೀಡುವ ಮೊದಲು ಸ್ಥಳ ಪರಿಶೀಲನೆ ನಡೆಸುವುದು ಅಗತ್ಯವಾಗಿದ್ದು, ಯೋಜನೆ ಅನುಮೋದನೆ ನೀಡುವುದಕ್ಕೂ ಮೊದಲು ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಪ್ರವಾಸೋದ್ಯಮ ಸಹಾಯಕ ನಿರ್ದೇಶಕರಾದ ಸಿ.ಜಗನ್ನಾಥ್, ಇಲ್ಲಿಯವರೆಗೆ ಪ್ರವಾಸೋದ್ಯಮ ಘಟಕಗಳಿಗೆ ಸಂಬಂಧಿಸಿದಂತೆ ಸುಮಾರು 9 ಪ್ರಸ್ತಾವನೆಗಳು ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿ, ಪ್ರವಾಸೋದ್ಯಮ ನೀತಿಯ ರಿಯಾಯಿತಿಗಳು ಮತ್ತು ಹೂಡಿಕೆ ಸಹಾಯಧನವನ್ನು ಅರ್ಹ ಪ್ರವಾಸೋದ್ಯಮ ಘಟಕಗಳಿಗೆ ನೀಡಲಾಗುತ್ತಿದೆ. ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೆ ಸ್ಟಾಂಪ್ ಶುಲ್ಕ, ನೋಂದಣಿ ಶುಲ್ಕ, ಭೂ ಪರಿವರ್ತನ ಶುಲ್ಕ, ಬಡ್ಡಿ ರಹಿತ ಸಾಲ, ರಿಯಾಯಿತಿ, ಪ್ರವೇಶ ತೆರಿಗೆ, ವಿಲಾಸಿ ತೆರಿಗೆಗಳ ಮೇಲೆ ವಿನಾಯಿತಿಗಳನ್ನು ಪ್ರವಾಸೋದ್ಯಮ ನೀತಿ ಅನ್ವಯ ನೀಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಕೆ.ಎ.ದೇವಯ್ಯ, ನಗರ ಮತ್ತು ಗ್ರಾಮಾಂತರ ಯೊಜನಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜಶೇಖರ, ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕರಾದ ಮಹೇಶ, ಸೆಸ್ಕ್ ಎಇಇ ರಮೇಶ್, ನಗರಸಭೆಯ ಆರೋಗ್ಯ ಘಟಕದ ಪರಿವೀಕ್ಷಕರಾದ ರಮೇಶ್, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕರಾದ ಸಬೀರ್ ಭಾಷಾ ಇತರರು ಹಾಜರಿದ್ದರು.