ಮಡಿಕೇರಿ: ಯಾವ ದೇಶ ತನ್ನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮರೆಯುತ್ತದೆಯೋ ಆ ದೇಶ ಪಥನವಾಗಲಿದೆ. ಇದು ಕೇವಲ ಒಂದು ದೇಶಕ್ಕೆ ಸೀಮಿತವಾದ ವಾದವಲ್ಲವೆಂದು ಅಭಿಪ್ರಾಯಪಟ್ಟಿರುವ ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಅಥ್ಲಿಟ್ ತೀತಿಮಾಡ ಅರ್ಜುನ್ ದೇವಯ್ಯ, ಕೊಡವರು ತಮ್ಮ ಶ್ರೀಮಂತ ಸಂಸ್ಕ್ರತಿ ಮತ್ತು ಸಂಸ್ಕಾರವನ್ನು ಪೋಷಿಸಿದರೆ ಕೊಡವ ಜನಾಂಗವನ್ನು ಪೋಷಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಯುನೈಟೆಡ್ ಕೊಡವ ಆರ್ಗನೈಸೇಷನ್ ಆಶ್ರಯದಲ್ಲಿ ಪಾಂಡಾಣೆ ನಾಡ್ಮಂದ್ ಸಹಕಾರದೊಂದಿಗೆ ಮೂರ್ನಾಡು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 3ನೇ ವರ್ಷದ ಮಂದ್ ನಮ್ಮೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಅವರು ಹೇಳಿದಂತೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತ್ಯಜಿಸಿದ ದೇಶ ಅವನತಿಯತ್ತ ಸಾಗುತ್ತದೆ. ಕೇವಲ ಆರ್ಥಿಕ ಅಭಿವೃದ್ಧಿಯ ಚಿಂತನೆಯೊಂದನ್ನೇ ಮುಂದಿಟ್ಟುಕೊಂಡು ಉಳಿದವೆಲ್ಲವನ್ನು ನಿರ್ಲಕ್ಷಿಸಿದ ಗ್ರೀಸ್ ದೇಶ ಅವನತಿಯನ್ನು ಹೊಂದಿರುವುದನ್ನು ಇಲ್ಲಿ ಸ್ಮರಿಸಬಹುದೆಂದರು. ಅದೆಷ್ಟೋ ಬಾರಿ ಭಾರತ ದೇಶದ ಮೇಲೆ ಹೊರ ದೇಶಗಳ ಆಕ್ರಮಣ, ದಬ್ಬಾಳಿಕೆ ನಡೆದಿದ್ದರು, ಇಲ್ಲಿನ ಉನ್ನತ ಸಂಸ್ಕೃತಿ ಭಾರತ ದೇಶವನ್ನು ಕಾಪಾಡಿಕೊಂಡು ಬಂದಿದೆ ಎಂದು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.
ವಿಚಾರ ಮತ್ತು ತತ್ತ್ವ ಜನರ ಜೀವನವನ್ನು ಬದಲಾಯಿಸಲಾಗದು. ತನ್ನತನವನ್ನು ಬಿಟ್ಟು ಜೀವನ ಸಾಗಿಸುವುದು ಗುಲಾಮಗಿರಿಯಾಗಿದ್ದು, ಸ್ವಾಭಿಮಾನದಿಂದ ಬದುಕಬೇಕೆಂದು ಕರೆ ನೀಡಿದರು. ಆತ್ಮಾಭಿಮಾನ ಇರುವವರು ತಮ್ಮ ಜನಾಂಗಕ್ಕೆ ಕೇಡು ಬಯಸುವುದಿಲ್ಲ. ಕೊಡವ ಸಂಘಟನೆಗಳ ಬಗ್ಗೆ ಅಥವಾ ಕೊಡವರ ಕುರಿತು ಮತ್ತೊಂದು ಕೊಡವ ಸಂಘಟನೆ ಅಥವಾ ವ್ಯಕ್ತಿಗಳು ನಿಂದನೆ ಮಾಡುವುದನ್ನು ಬಿಡಬೇಕೆಂದು ಕಿವಿಮಾತುಗಳನ್ನಾಡಿದರು.
ಹಿಂದೆ ಮಂದ್ ಗಳಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯುತ್ತಿತ್ತಲ್ಲದೆ, ಮಂದ್ ಗಳು ಶಕ್ತಿ ಭಕ್ತಿಯ ಕೇಂದ್ರಗಳಾಗಿದ್ದವು. ಮಂದ್ ಗಳಲ್ಲಿ ಕೊಡವರು ಪ್ರತಿ ದಿನ ಸೇರಿ ಕೊಡವರ ಬಗ್ಗೆ ಚಿಂತನೆ ನಡೆಸುವ ಪರಿಪಾಠವಿತ್ತು. ಇದು ಮುಂದುವರಿಯಬೇಕೆಂದ ಅರ್ಜುನ್ ದೇವಯ್ಯ ಮಂದ್ ಗಳಿಗೆ ಕಾಯಕಲ್ಪ ನೀಡಬೇಕೆಂದು ಕರೆ ನೀಡಿದರು.
ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ನಾಡತಕ್ಕ ಪಳಂಗಂಡ ಗಪ್ಪು ಗಣಪತಿ, ತಕ್ಕರಾದ ಕೋಟೇರ ರಘು ಕಾರ್ಯಪ್ಪ, ಮಡೆಯಂಡ ವಿಠಲ ಬೊಳ್ಯಪ್ಪ, ಕಾಳಿಮಾಡ ಡಾ. ಶಿವಪ್ಪ, ಯುಕೋ ಉಪಾಧ್ಯಕ್ಷ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟೀರ ವಾಸು ಮಾದಪ್ಪ, ನಾಡ ತಕ್ಕರಾದ ಪಳಂಗಂಡ ಪೊನ್ನು ಪೊನ್ನಪ್ಪ, ಪಳಂಗಂಡ ಗಣೇಶ್ ಚೀಯಣ್ಣ, ಕೋಟೇರ ಪ್ರತಾಪ್ ಕಾರ್ಯಪ್ಪ, ಕೋಟೇರ ರಶಿಯಾ ಮೇದಪ್ಪ, ಮಡೆಯಂಡ ಮಿಟ್ಟು ತಿಮ್ಮಯ್ಯ, ಮಡೆಯಂಡ ಮಣಿ ಮುದ್ದಪ್ಪ, ಕೊಡವ ಸಮಾಜದ ಅಧ್ಯಕ್ಷ ಪಳಂಗಂಡ ಗಣೇಶ್, ಊರು ತಕ್ಕರಾದ ಕಿಗ್ಗಾಲಿನ ಪುದಿಯೊಕ್ಕಡ ವಿಶ್ವನಾಥ್, ಬಾಡಗದ ಮುಕ್ಕಾಟಿರ ಆಟು ಚಂಗಪ್ಪ, ಮುತ್ತಾರ್ಮುಡಿಯ ಕೆಂಬಡತಂಡ ರಾಜ ಮೇದಪ್ಪ, ಐಕೊಳದ ಮುಂಡಂಡ ನಂಜಪ್ಪ ಹಾಜರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮೂರ್ನಾಡು ಮುಖ್ಯ ಬೀದಿಗಳಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಯಿತು. ಮೂರ್ನಾಡು ಪಟ್ಟಣದ ಹೃದಯ ಭಾಗದಲ್ಲಿರುವ ಪಾಂಡಾಣೆ ಮಂದ್ ನ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ನಾಡತಕ್ಕರಾದ ಪಳಂಗಂಡ ಗಪ್ಪು ಗಣಪತಿ ಸಂಪ್ರದಾಯದಂತೆ ತಪ್ಪಡ್ಕ ಕಟ್ಟುವುದರೊಂದಿಗೆ ಮಂದ್ ನಮ್ಮೆಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಮಂದ್ ಗಳ ಪ್ರತಿನಿಧಿಗಳು ಕಾಪಾಳ ಕಳಿಯೊಂದಿಗೆ ಮೂರ್ನಾಡು ಶಾಲಾ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿದರು.