ಚಾಮರಾಜನಗರ: ಜಿಲ್ಲೆಯಲ್ಲಿರುವ ಹೆಚ್ಚಿನ ಸರ್ಕಾರಿ ಶಾಲೆಗಳು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದು, ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಹಿತಾಸಕ್ತಿ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗಿಲ್ಲದ ಕಾರಣದಿಂದಾಗಿ ಅವು ದನದ ಕೊಟ್ಟಿಗೆಯಂತೆ ಗೋಚರಿಸುತ್ತಿದ್ದು, ಅದರಲ್ಲೇ ವಿದ್ಯೆ ಕಲಿಯುವುದು ಬಡ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗುತ್ತಿದೆ.
ಶಾಲೆಯಲ್ಲಿರುವ ಸಮಸ್ಯೆಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗದ ಕಾರಣ ಶಾಲಾಶಿಕ್ಷಕರು ಕೂಡ ಅದೇ ವ್ಯವಸ್ಥೆಗೆ ಹೊಂದಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ.
ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು ಎಂದು ಭಾಷಣ ಮಾಡುವ ಆಡಳಿತರೂಢರು, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಿದೆ? ಶಾಲೆ ಅಲ್ಲಿನ ವಾತಾವರಣ ಹೇಗಿದೆ ಎಂಬುವುದರ ಬಗ್ಗೆ ಯೋಚಿಸುತ್ತಿಲ್ಲ. ಇದೆಲ್ಲದರ ಪರಿಣಾಮ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಂದ ದೂರವಾಗಿ ಮುಚ್ಚುವ ಹಂತಕ್ಕೆ ಬಂದು ನಿಂತಿವೆ.
ಒಂದೋ ಎರಡೋ ಮಕ್ಕಳನ್ನು ಹೊಂದಿರುವ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಹೀಗಿರುವಾಗ ಸಮಸ್ಯೆ ತಾಂಡವವಾಡುವ ಸರ್ಕಾರಿ ಶಾಲೆಗಳತ್ತ ಅವರ್ಯಾಕೆ ದೃಷ್ಠಿ ನೆಡುತ್ತಾರೆ. ಹಣ ಖರ್ಚಾದರೂ ಪರ್ವಾಗಿಲ್ಲ ಖಾಸಗಿ ಶಾಲೆಯಲ್ಲೇ ಕಲಿಯಲಿ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಇದರ ಪರಿಣಾಮ ಗ್ರಾಮೀಣ ಪ್ರದೇಶದ ಶಾಲೆಯ ಮೇಲೆ ಬೀರುತ್ತಿದೆ. ಬಹಳಷ್ಟು ಗ್ರಾಮಗಳಲ್ಲಿ ಗ್ರಾಮಸ್ಥರೇ ಮುತುವರ್ಜಿ ವಹಿಸಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದು, ಅವು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿವೆ.
ಇದೆಲ್ಲದರ ನಡುವೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ವಿಚಿತ್ರವಾಗಿದೆ. ಇಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಈ ಶಾಲೆಯಲ್ಲಿ 211 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳು ನವೀಕರಣ ಕಾಣದ ಹಳೆಯ ಶಾಲಾಕೊಠಡಿ, ನೀರೇ ಇಲ್ಲದೆ ದುರ್ವಾಸನೆ ಬೀರುವ ಶೌಚಾಲಯ, ರಾಶಿಬಿದ್ದ ಕಸಕಡ್ಡಿ, ಸ್ವಚ್ಛತಾ ಆಂದೋಲವನ್ನೇ ಅಣಕಮಾಡುವ ಅಶುಚಿತ್ವ, ಶಾಲಾವರಣದಲ್ಲೇ ಕಾರ್ಯ ನಿರ್ವಹಿಸುವ ಅಂಗನವಾಡಿ ಕೇಂದ್ರ, ತ್ಯಾಜ್ಯ ನೀರು ಹರಿದು ಹೋಗದೆ ದುರ್ವಾಸನೆ ಬೀರುವ ಚರಂಡಿ, ಮೈಗೆ ಮುತ್ತಿಕೊಳ್ಳುವ ಸೊಳ್ಳೆಗಳು ಎಲ್ಲವೂ ಶಾಲೆಯ ಅವ್ಯವಸ್ಥೆಯನ್ನು ಸಾರಿ ಹೇಳುತ್ತಿವೆ.
ಶಾಲೆಯಲ್ಲಿ ನಿರ್ಮಿಸಿದ್ದ ಶೌಚಾಲಯ ಕಟ್ಟಡವು ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿದ್ದು ಇದಕ್ಕೆ ಬೀಗ ಹಾಕಲಾಗಿದೆ. ಇದರಿಂದಾಗಿ ಎಲ್ಲ್ಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ತಲಾ ಒಂದು ಶೌಚಾಲಯ ಕೊಠಡಿ ನೀಡಲಾಗಿದ್ದು, ಅಲ್ಲಿಗೂ ಸಮರ್ಪಕ ನೀರಿನ ಸರಬರಾಜು ಇಲ್ಲದ ಪರಿಣಾಮ ಬಯಲನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.
ಇನ್ನಾದರೂ ಶಾಲೆಯತ್ತ ಕಾಳಜಿಯಿರುವ ಜನನಾಯಕರಿದ್ದರೆ ಶಾಲೆಯ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳು ನೆಮ್ಮದಿಯಾಗಿ ಕಲಿಯಲು ಅವಕಾಶ ಮಾಡಿಕೊಡಲಿ.