ಹಾಸನ: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಹಾಗೂ ಸೂಕ್ತ ಭದ್ರತೆಗೆ ಆಗ್ರಹಿಸಿ ನಗರದ ಹಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ವೈದ್ಯರು ಕರ್ತವ್ಯವನ್ನು ಬಹಿಷ್ಕರಿಸಿದ್ದರಿಂದ ರೋಗಿಗಳು ಪರದಾಂಡುವಂತಾದ ಘಟನೆ ಸೋಮವಾರ ನಡೆದಿದೆ.
ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ಕೊಠಡಿ ಎದುರು ಜಮಾಯಿಸಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅವರಿಗೆ ಬೆಂಬಲ ಸೂಚಿಸಿ ವೈದ್ಯರು ಭದ್ರತೆ ಒದಗಿಸಿಬೇಕು ಎಂದು ಒತ್ತಾಯಿಸಿದರು. ಈ ಕುರಿತಂತೆ ಡಾ.ರವಿಕುಮಾರ್ ಕೆಲ ವೈದ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರೊಡನೆ ಸೋಮವಾರ ಮಧ್ಯಾಹ್ನದ ವೇಳೆಗೆ ಮಾತುಕತೆ ನಡೆಸಿದರಾದರೂ ಮಾತುಕತೆ ಫಲ ನೀಡಲಿಲ್ಲ.
ಆಸ್ಪತ್ರೆಯಲ್ಲಿ ಪದೇ ಪದೇ ವೈದ್ಯರ ಮೇಲೆ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಆದರೂ ಕೂಡ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ಎಡವಿದೆ. ಇದು ಹೀಗೆಯೇ ಮುಂದುವರೆದರೆ ಕರ್ತವ್ಯ ನಿರ್ವಹಿಸುವುದು ಹೇಗೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡಬೇಕಾಯಿತು. ತುರ್ತು ಚಿಕಿತ್ಸೆ ಹೊರತು ಪಡಿಸಿ ಮತ್ಯಾವ ಚಿಕಿತ್ಸೆ ದೊರೆಯದೇ ಸಂಕಷ್ಟ ಎದುರಿಸುವಂತಾಯಿತು. ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಕೂಡ ಹಿರಿಯ ವೈದ್ಯರ್ಯಾರು ಕಂಡು ಬರಲಿಲ್ಲ. ಬದಲಿಗೆ ಒಂದಿಬ್ಬರು ಕಿರಿಯ ವೈದ್ಯರು ಮಾತ್ರ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದು ಕಂಡು ಬಂತು.