ಮಡಿಕೇರಿ: ಯಾಂತ್ರಿಕ ಯುಗದ ಪೈಪೋಟಿ ಜಗತ್ತಿನಲ್ಲಿ ಒಳ್ಳೆಯ ಮನಸ್ಸುಗಳು ಗಟ್ಟಿಯಾಗಿ ನಿಲ್ಲಬೇಕಾದರೆ ಶಿಕ್ಷಣದೊಂದಿಗೆ ಸಂಸ್ಕೃತಿಯ ಸದಭಿರುಚಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಲ್.ಎನ್.ಕುಳ್ಳಯ್ಯ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಟ್ಟಗೇರಿ ಗ್ರಾಮದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ನಾಡಿನಲ್ಲಿ ಪ್ರತಿಷ್ಠಿತ ಕಲೆಗಳಿದ್ದು, ಅವುಗಳನ್ನು ಬೆಳೆಸಲು ಇಲಾಖೆ ಅನೇಕ ಯೋಜನೆಗಳನ್ನು ಹೊರತಂದಿದೆ ಎಂದರು. ಇದರಲ್ಲಿ ಯುವಸೌರಭವು ಒಂದಾಗಿದ್ದು, ಇದರ ಮೂಲಕ ಕಲೆಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸಲಾಗುತ್ತಿದ್ದು, ಕಲಾವಿನಿಮಯ ಕೂಡ ಅಡಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡು ನುಡಿ ಸಾಹಿತ್ಯ ಸಂಸ್ಕೃತಿಯನ್ನು ಗಟ್ಟಿಗೊಳಿಸುವುದರೊಂದಿಗೆ ಕಲಾವಿದರುಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಸಾಮಾನ್ಯವಾದ ವ್ಯಕ್ತಿಯನ್ನು ಗುರುತಿಸಿ ಪರಿಪೂರ್ಣವಾದ ಕಲಾವಿದರನ್ನಾಗಿ ಮಾಡಿ ನಮ್ಮ ಕಲೆಯನ್ನು ಗಟ್ಟಿಗೊಳಿಸಲಾಗುತ್ತಿದೆ. ಇದಕ್ಕೆ ಯುವ ಸಮೂಹ ಮುಂದೆ ಬರಬೇಕು. ಕಲೆಯು ಮನಸ್ಸಿನ ಸಂಸ್ಕೃತಿಯನ್ನು ತಿಳಿಗೊಳಿಸುವುದರೊಂದಿಗೆ ಸಮಾಜದ ಕೊಳೆಯನ್ನು ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಲಲಿತಕಲೆಗಳನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಮ್ಮ ಭಾಷೆ, ನೆಲಜಲದ ಬಗ್ಗೆ ಪ್ರೀತಿ ಹುಟ್ಟಲು ಸಾಧ್ಯ ಎಂದು ಕುಳ್ಳಯ್ಯ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕೊಡಗಿನ ಕಲೆಗಳಿಗೆ ವಿಶೇಷ ಸ್ಥಾನಮಾನವಿದ್ದು, ಕೊಡಗಿನ ಸಂಪ್ರದಾಯ, ಸಂಸ್ಕೃತಿ, ಆಚಾರ ವಿಚಾರಗಳು ವಿಭಿನ್ನವಾಗಿದೆ. ಇದರಿಂದಲೇ ವಿಶೇಷ ಗೌರವವಿದೆ. ಆ ದಿಸೆಯಲ್ಲಿ ಜಿಲ್ಲೆಯ ಕಲಾವಿದರುಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದರು.
ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಾಹ್ಯ ಪ್ರಪಂಚಕ್ಕೆ ಕೊಂಡೊಯ್ಯಬೇಕಾದರೆ ಧೈರ್ಯದಿಂದ ಅವಕಾಶಗಳನ್ನು ಬಳಸಿಕೊಳ್ಳಲು ನಿರಂತರ ಅಭ್ಯಾಸ ಮುಖ್ಯ. ಇದಕ್ಕಾಗಿ ನೂರಾರು ಕಾರ್ಯಕ್ರಮಗಳನ್ನು ಇಲಾಖೆ ನಡೆಸುತ್ತಿರುವುದು ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು. ಹಿಂದಿನಿಂದಲೂ ಜಾನಪದ ಸಂಸ್ಕೃತಿಯ ಸಾಹಿತ್ಯವು ನಮ್ಮ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿರುವುದನ್ನು ನೋಡಿದ್ದೇವೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ದೂರದರ್ಶನಗಳಿಗೆ ಮಾರುಹೋಗಿ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಯೋಗ, ಧ್ಯಾನದ ಕಡೆಗೆ ಒಲವು ತೋರಬೇಕು. ಇದರಿಂದಾಗಿ ಶಿಸ್ತಿನ ಜೀವನ ಅಳವಡಿಸಿಕೊಂಡು ಸ್ವಾವಲಂಬಿಗಳಾಗಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲ ಕಾರೇರ ಕವನ ಮಾದಪ್ಪ ಮಾತನಾಡಿ ಸಂಸ್ಕೃತಿಯೊಂದಿಗೆ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಉಳಿದರೆ ಭಾಷೆ ಉಳಿದಂತೆ, ಭಾಷೆ ಉಳಿದರೆ ದೇಶ ಉಳಿದಂತೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ ಅವರು ಇಲಾಖೆಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಎಸ್.ಗಣಪತಿ, ತಳೂರು ಸೋಮಣ್ಣ, ಜಗದೀಶ್ ರೈ, ಅರುಣ್ ಉಪಸ್ಥಿತರಿದ್ದರು.
ಯುವಸೌರಭ ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ, ಪೂಜಾಕುಣಿತ, ವೀರಗಾಸೆ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಮೂಹ ನೃತ್ಯ, ಭಜನೆ, ಕಥಾಕೀರ್ತನೆ ಕಾರ್ಯಕ್ರಮಗಳು ಗಮನ ಸೆಳೆದವು.
ಸಭೆಯ ಮೊದಲಿಗೆ ಬೆಟ್ಟಗೇರಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ನಾಗರಾಜು ನಿರೂಪಿಸಿದರು. ಶಿಕ್ಷಕ ಜಗನಾಥ್ ವಂದಿಸಿದರು.