ಮಡಿಕೇರಿ: ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವನ್ನು ನಕ್ಸಲ್ ಮಾವೋ ವಾದಿ ಹಾಗೂ ಐಸಿಸ್ ದಾಳಿಯಿಂದ ಪಾರು ಮಾಡಲು ತಕ್ಷಣ ಬುಡಕಟ್ಟು ಕುಲದ ಅಧಿಕೃತ ಮಾನ್ಯತೆಯನ್ನು ಸಂವಿಧಾನಾತ್ಮಕವಾಗಿ ಕೊಡವರಿಗೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡಗು ಜಿಲ್ಲೆ ಐಸಿಸ್ನ ಘಝ್ವಾ-ತುರ್-ಹಿಂದ್ ಕಾರಿಡಾರ್ ಮತ್ತು ಮಾವೋ ವಾದಿಗಳ ರೆಡ್ ಕಾರಿಡಾರ್ ಕಾರ್ಯಸೂಚಿಯ ಅಪಾಯಕಾರಿ ಪಿತೂರಿಯನ್ನು ಎದುರಿಸುತ್ತಿದೆ ಎಂದು ಆರೋಪಿಸಿದರು. ದಿಡ್ಡಳ್ಳಿ ಪ್ರಕರಣದ ಹಿಂದೆ ನಕ್ಸಲ್ ಹಾಗೂ ಐಸಿಸ್ ಬೆಂಬಲಿತ ಸಂಘಟನೆಗಳ ಸಂಚು ಅಡಗಿದೆ. ದೇಶ ದ್ರೋಹಿಗಳ ಅಡಗುತಾಣವಾಗಿ ಕೊಡಗು ಜಿಲ್ಲೆ ಮಾರ್ಪಡುತ್ತಿದೆ ಎಂದು ಆರೋಪಿಸಿದ ನಾಚಪ್ಪ, ದಿಡ್ಡಳ್ಳಿ ಪ್ರಕರಣದ ಬಗ್ಗೆ ಎನ್ಐಎ ಮತ್ತು ರಾ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ನಾಥ್ ಸಿಂಗ್ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದರು. ದಿಡ್ಡಳ್ಳಿಯಲ್ಲಿ ಹೋರಾಟದ ನೆಪದಲ್ಲಿ ಪಾಲ್ಗೊಂಡ ದೇಶದ್ರೋಹಿಗಳನ್ನು ಸಜರ್ಿಕಲ್ ಆಪರೇಷನ್ ರೀತಿಯಲ್ಲಿ ನಾಶ ಮಾಡಬೇಕು ಎಂದು ಒತ್ತಾಯಿಸಿದರು.
ಗಡಿ ಜಿಲ್ಲೆ ಮತ್ತು ಗಡಿ ರಾಜ್ಯದ ವಲಸಿಗರನ್ನು ದಿಡ್ಡಳ್ಳಿ ಅರಣ್ಯ ಪ್ರದೇಶಕ್ಕೆ ಕರೆ ತಂದು ಇವರ ನಡುವಿನಲ್ಲಿ ಬೆರಳೆಣಿಕೆಯಷ್ಟು ಕುರುಬರು ಮತ್ತು ಎರವರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ಬಾಂಗ್ಲಾ ದೇಶದಿಂದ ಕಾರ್ಮಿಕರಾಗಿ ಬಂದವರು ಕೂಡ ಇಲ್ಲಿ ನೆಲೆ ಕಂಡುಕೊಂಡಿರುವ ಬಗ್ಗೆ ಸಂಶಯವಿದೆ. ಒರಿಸ್ಸಾ ಭಾಗದಿಂದ ದಿಡ್ಡಳ್ಳಿ ಪ್ರದೇಶಕ್ಕೆ ನಕ್ಸಲರು ಬಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದ ಎನ್.ಯು. ನಾಚಪ್ಪ, ಈ ಭಾಗದಲ್ಲಿ ನಿಷೇಧಾಜ್ಞೆಯನ್ನು ಮುಂದುರಿಸಬೇಕೆಂದು ಒತ್ತಾಯಿಸಿದರು. ದಿಡ್ಡಳ್ಳಿ ಮಾದರಿಯಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ಕೂಡ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆಯನ್ನು ಹೆಚ್ಚಿಸಬೇಕೆಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಬ್ಯಾಂಕ್ ವೊಂದರಲ್ಲಿ ಸಮಾನತೆಗಾಗಿ ಜನಾಂದೋಲನ ಖಾತೆಯಡಿ ಹಣ ಸಂಗ್ರಹಿಸಲಾಗುತ್ತಿದ್ದು, ಇದು ನಕ್ಸಲ್ ಚಟುವಟಿಕೆ ನಡೆಯುತ್ತಿರುವುದಕ್ಕೆ ಪುಷ್ಠಿಯನ್ನು ನೀಡಿದೆ ಎಂದು ಆರೋಪಿಸಿದರು. ದಿಡ್ಡಳ್ಳಿಯಲ್ಲಿ ಹೋರಾಟ ನಡೆಸಿದ ದೇಶ ದ್ರೋಹಿಗಳು ಪಾಲೆಮಾಡು, ಚೆರಿಯಪರಂಬು ಸೇರಿದಂತೆ ಇತರ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆಗಳಿದೆ ಎಂದು ನಾಚಪ್ಪ ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಂಡವಾಳ ಶಾಹಿ ಕಂಪೆನಿಗಳು ಸಾವಿರಾರು ಏಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಪ್ರತಿ ಏಕರೆಗೆ 3 ಲಕ್ಷ ರೂ. ನೀಡಿ ಅಕ್ರಮವನ್ನು ಸಕ್ರಮಗೊಳಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಒಂದೆರಡು ಏಕರೆ ಒತ್ತುವರಿ ಮಾಡಿಕೊಂಡಿರುವ ಕೊಡವರನ್ನು ಮಾತ್ರ ಟಾರ್ಗೆಟ್ ಮಾಡಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಿಡ್ಡಳ್ಳಿಯಲ್ಲಿ ನಿರಾಶ್ರಿತರೆಂದು ಹೇಳಿಕೊಂಡು ನೆಲೆ ನಿಂತವರಿಗೆ ಯಾವುದೇ ಕಾರಣಕ್ಕೂ ಆರ್ಥಿಕ, ರಾಜಕೀಯ ಹಾಗೂ ಭೂಮಿಯ ಪ್ಯಾಕೇಜ್ ನೀಡಬಾರದೆಂದು ಅವರು ಒತ್ತಾಯಿಸಿದರು. ದಿಡ್ಡಳ್ಳಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಮ್, ಸಂಸದರಾದ ಪ್ರತಾಪ ಸಿಂಹ ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ ಅವರುಗಳು ಪ್ರಜ್ಞಾವಂತಿಕೆಯನ್ನು ಮೆರೆದಿದ್ದಾರೆ ಎಂದು ನಾಚಪ್ಪ ಶ್ಲಾಘಿಸಿದರು.
ಕೊಡವರನ್ನು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವೆಂದು ಸಂವಿಧಾನಾತ್ಮಕವಾಗಿ ಘೋಷಿಸುವಂತೆ ಒತ್ತಾಯಿಸಿ ಜ.5 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಿಎನ್ಸಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಅವರು ಇದೇ ಸಂದರ್ಭ ತಿಳಿಸಿದರು.