ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿ ಮಾರ್ಗವಾಗಿ ಶೀಳನೆರೆಗೆ ಹೆಚ್ಚುವರಿ ಬಸ್ಗಳು ಸಂಚರಿಸಲು ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿ ಅರೆಬೊಪ್ಪನಹಳ್ಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆ ಚಳುವಳಿ ನಡೆಸಿದರು.
ಬಸ್ ಡಿಪೋನಿಂದ ಅರೆಬೊಪ್ಪನಹಳ್ಳಿ, ಬೇಲದಕೆರೆ, ಶೀಳನೆರೆ ಮತ್ತು ರಾಜಘಟ್ಟದ ಮಾರ್ಗವಾಗಿ ಶಾಲಾ ಅವಧಿಯಲ್ಲಿ ಕೇವಲ ಎರಡು ಬಸ್ಗಳು ಮಾತ್ರ ಸಂಚರಿಸುತ್ತವೆ. ಈ ಎರಡು ಬಸ್ಸುಗಳು ಭರ್ತಿಯಾಗಿ ಬರುವ ಕಾರಣ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ನಿಲ್ಲಿಸದೇ ತೆರಳುವುದರಿಂದ ಶಾಲಾ – ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಶಾಲೆಯ ಸಮಯದಲ್ಲಿ ಹೆಚ್ಚು ಮಕ್ಕಳು ಓಡಾಡುವುದರಿಂದ ಹೆಚ್ಚುವರಿಯಾಗಿ ಬಸ್ಸುಗಳನ್ನು ಬಿಡಬೇಕು ಈ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆಯ ವಿಚಾರ ತಿಳಿದ ಡಿಪೋ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಾವು ರಜೆಯ ಮೇಲೆ ತೆರಳಿದ್ದು ಒಂದೆರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು. ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಸದ್ಯ ಪ್ರತಿಭಟನೆಯನ್ನು ಕೈಬಿಟ್ಟಿರುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮುಂದೆ ಬಸ್ ವ್ಯವಸ್ಥೆ ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.