ಮಡಿಕೇರಿ: ಸಾಮಾನ್ಯವಾಗಿ ಹೊಸ ವರ್ಷದ ದಿನ ಮೋಜು ಮಸ್ತಿಯಲ್ಲಿ ತೊಡಗುವುದನ್ನು ನೋಡಿರಬಹುದು ಆದರೆ ಚಿಕ್ಕಮಗಳೂರಿನಲ್ಲಿ ಕೊಡಗಿನ ಯುವಕ ಸೇರಿದಂತೆ ಹನ್ನೊಂದು ಮಂದಿಯ ತಂಡ ಕಡವೆಯನ್ನು ಬೇಟೆಯಾಡಿ ಮಾಂಸದಿಂದ ಅಡುಗೆ ಮಾಡಿ ಹೊಸವರ್ಷಾಚರಣೆ ಮಾಡಲು ಹೋಗಿ ಜೈಲ್ ಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸ ವರ್ಷದ ಸಂಭ್ರಮಾಚರಣೆಯಂದು ಅರಣ್ಯಕ್ಕೆ ನುಗ್ಗಿ ಎರಡು ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿಬಿದ್ದ ಬೇಟೆಗಾರರ ಪೈಕಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಬೆಳೆಗಾರ ಮಹಮ್ಮದ್ ರಿಜ್ವಾನ್ (36), ಬೆಂಗಳೂರಿನ ಇನ್ಫೋಸಿಸ್ ಇಂಜಿನಿಯರ್ ಮೀರ್ ನಾಯಕ್ ಅಲಿ, ಗ್ಲೋಬಲ್ ಸಲ್ಯೂಷನ್ ನ ಇಂಜಿನಿಯರ್ ಸೈಯ್ಯದ್ ಅಮೀರ್, ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೀರ್ ಜಮೀರ್ ಅಲಿ, ಸಕಲೇಶಪುರದ ಅಕ್ತರ್ ಅಹ್ಮದ್, ಕರ್ನಾಟಕ ರೈಫಲ್ ಅಸೋಸಿಯೇಶ್ ನ ಮಹಮ್ಮದ್ ಸಮೀರ್, ಮುಜಾಫಿರ್, ಚಿಕ್ಕಮಗಳೂರು ಅತ್ತಿಗುಂಡಿ ಮಹಲ್ ಗ್ರಾಮದ ಅರುಣ್, ಪ್ರಸನ್ನ, ಹರೀಶ್, ಚೇತನ್ ಇದ್ದಾರೆ. ಇವರೆಲ್ಲರೂ ಬೇರೆ ಬೇರೆ ಕಡೆ ನೆಲೆಸಿದ್ದವರಾಗಿದ್ದು ಗೆಳೆಯರಾಗಿದ್ದರು ಎನ್ನಲಾಗಿದೆ.
ಇವರು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕೆಮ್ಮಣ್ಣುಗುಂಡಿ ಮತ್ತು ರಾಜ್ ಮಹಲ್ ಮಾರ್ಗದ ನೆತ್ತಿ ಚೌಕ ಎಂಬಲ್ಲಿ ಶನಿವಾರ ರಾತ್ರಿ ಹನ್ನೊಂದು ಮಂದಿ ಸೇರಿ ಎರಡು ಕಡವೆಗಳನ್ನು ಬೇಟೆಯಾಡಿದ್ದರು. ಬಳಿಕ ಮಾಂಸ ಮಾಡಿ ತಾವು ತಂದಿದ್ದ ವಾಹನದಲ್ಲಿ ಮಾಂಸವನ್ನು ಸಾಗಿಸಿ ಹೊಸವರ್ಷವನ್ನು ಅದ್ಧೂರಿಯಾಗಿ ಆಚರಿಸುವ ತವಕದಲ್ಲಿದ್ದರು.
ಒಂದು ಕಡವೆಯನ್ನು ಮಾಂಸ ಮಾಡಿದ್ದರೆ ಮತ್ತೊಂದನ್ನು ಹಾಗೆಯೇ ಹಾಕಿಕೊಂಡು ಜೀಪು ಮತ್ತು ಪಿಕಪ್ ನಲ್ಲಿ ಸಾಗಿಸುತ್ತಿದ್ದರು. ಕೆಮ್ಮಣ್ಣುಗುಂಡಿ ಅರಣ್ಯ ತನಿಖಾ ಠಾಣೆ ಬಳಿ ವನ್ಯಜೀವಿ ವಿಭಾಗದ ಅಧಿಕಾರಿಗಳು ವಾಹನ ತಪಾಸಣೆ ಮಾಡಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಫೀಕ್ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಉಳಿದವರನ್ನು ತಕ್ಷಣ ಮಾಂಸ, ಎರಡು ವಾಹನ, ಬಂದೂಕು ಸಹಿತ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.