ಮಡಿಕೇರಿ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ವಿದ್ಯಾ ಪ್ರತಿಷ್ಠಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೊಡಗು ಜಿಲ್ಲೆಯಿಂದ 3 ಮಂದಿ ಕಿರಿಯ ವಿಜ್ಞಾನಿಗಳು ಭಾಗವಹಿಸಿದ್ದರು.
ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಎಂಬ ಕೇಂದ್ರ ವಿಷಯ ಕುರಿತಂತೆ ಜರುಗಿದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹರ್ಷ ಪೊನ್ನಪ್ಪ ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು, ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಹನಾ ರುಕಿಯಾ ಇಂಗಾಲದ ಹೆಜ್ಜೆ ಗುರುತುಗಳು ಕುರಿತು ಹಾಗೂ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಂ.ತಂಗಮ್ಮ ಹಳೆಯ ಸಾಂಪ್ರದಾಯಿಕ ಜ್ಞಾನ ಪದ್ಧತಿ ಕುರಿತು ತಮ್ಮ ತಂಡದೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ರೂಪಿಸಿದ್ದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ.
ಈ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗಿನ 3 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕ ರಾಜ್ಯದಿಂದ 30 ಮಂದಿ ಕಿರಿಯ ವಿಜ್ಞಾನಿಗಳು ಹಾಗೂ 8 ಮಂದಿ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.